ADVERTISEMENT

ಅಭಿವೃದ್ಧಿಯ ಯೋಜನೆ: ಪಶ್ಚಿಮ ಘಟ್ಟಕ್ಕೆ ಧಕ್ಕೆ

ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿ ಅಧ್ಯಕ್ಷ ಪ್ರೊ.ಮಾಧವ್ ಗಾಡ್ಗೀಳ್ ಕಳವಳ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

ಬೆಂಗಳೂರು: `ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಿ ವರ್ಗ ರೂಪಿಸುತ್ತಿರುವ ಅವೈಜ್ಞಾನಿಕ ಯೋಜನೆಗಳಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ' ಎಂದು ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷ ಪ್ರೊ.ಮಾಧವ್ ಗಾಡ್ಗೀಳ್ ಕಳವಳ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭಾನುವಾರ ನಡೆದ ಭಾರತೀಯ ಜೀವ ವೈವಿಧ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಪಶ್ಚಿಮ ಘಟ್ಟ ಸಾಲಿನಲ್ಲಿ ಸೂಕ್ಷ್ಮ ಜೈವಿಕ ವ್ಯವಸ್ಥೆಯಿದ್ದು, ವಿವಿಧ ಯೋಜನೆಗಳ ಕಾರಣದಿಂದ ಇಲ್ಲಿನ ಜೀವ ವೈವಿಧ್ಯ ಹಂತ ಹಂತವಾಗಿ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಧಿಕಾರಿಗಳು ರೂಪಿಸುವ ಅವೈಜ್ಞಾನಿಕ ಯೋಜನೆಗಳು. ಪರಿಸರ ಕಾಳಜಿ ಇಲ್ಲದ ಯೋಜನೆಗಳಿಂದ ಜೀವ ವೈವಿಧ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲ' ಎಂದು ಅವರು ವಿಷಾದಿಸಿದರು.

`ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ಯೋಜನೆಗಳನ್ನು ರೂಪಿಸುವ ಮುನ್ನ ಸ್ಥಳೀಯ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ಪ್ರದೇಶದಲ್ಲಿ ಸ್ಥಳೀಯರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಮುದಾಯಗಳ ಸಹಭಾಗಿತ್ವವಿಲ್ಲದ ಅಭಿವೃದ್ಧಿಯಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಅವರು ಹೇಳಿದರು.

ಕೇಂದ್ರ ಕಾರ್ಪೊರೇಟ್ ಹಾಗೂ ಪೆಟ್ರೋಲಿಯಂ ಮತ್ತ ನೈಸರ್ಗಿಕ ಅನಿಲ ಖಾತೆಯ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, `ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆಗೆ ಯುನೆಸ್ಕೊ ಮಾನ್ಯತೆ ಸಿಕ್ಕಿರುವುದು ದೊಡ್ಡ ಹೆಗ್ಗಳಿಕೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಸಂರಕ್ಷಣೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ' ಎಂದರು.

ಸಂಸದ ಅನಂತ ಕುಮಾರ್ ಮಾತನಾಡಿ, `ಜೀವ ವೈವಿಧ್ಯದ ಮಹತ್ವದ ಬಗ್ಗೆ ಮೊದಲು ಜನಪ್ರತಿನಿಧಿಗಳಲ್ಲಿ ಅರಿವು ಮೂಡಿಸಬೇಕಾದ್ದು ಅಗತ್ಯ. ಹೀಗಾಗಿ ಗ್ರಾಮ ಪಂಚಾಯ್ತಿ ಮಟ್ಟದಿಂದ ಸಂಸತ್ತಿನವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಜೀವ ವೈವಿಧ್ಯದ ಮಹತ್ವದ ಬಗ್ಗೆ ವಿಚಾರ ಸಂಕಿರಣ ನಡೆಸಲು ತಜ್ಞರು ಮುಂದಾದರೆ, ಅದಕ್ಕೆ ಸ್ಪೀಕರ್ ಅವರಿಂದ ಅನುಮತಿ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ' ಎಂದರು.

ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, `ಜಗತ್ತಿನಲ್ಲೇ ಅಪರೂಪದ ಪ್ರಾಣಿ ಮತ್ತು ಸಸ್ಯ ಪ್ರಬೇಧಗಳನ್ನು ಪಶ್ಚಿಮ ಘಟ್ಟ ಪ್ರದೇಶ ಹೊಂದಿದೆ. ಸುಮಾರು ಎರಡು ಸಾವಿರ ಅಪರೂಪದ ಸಸ್ಯ ಪ್ರಬೇಧಗಳು ಈ ಪ್ರದೇಶದಲ್ಲಿವೆ. ಸುಮಾರು 22 ನದಿಗಳು, 180 ಉಪನದಿಗಳು ಹುಟ್ಟುವ ತಾಣ ಪಶ್ಚಿಮ ಘಟ್ಟ. ಇಂತಹ ಅಪರೂಪದ ಜೀವ ವೈವಿಧ್ಯ ಪ್ರದೇಶವನ್ನು ಸಂರಕ್ಷಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ' ಎಂದರು.

ಕೆಜೆಪಿ ಜತೆ ಮೈತ್ರಿ ಇಲ್ಲ
`ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಬರುತ್ತಿದೆ. ಈಗ ಭ್ರಷ್ಟರು ನಡೆಸುತ್ತಿರುವ ಕೆಜೆಪಿ ಪಕ್ಷಕ್ಕೆ ಕಾಂಗ್ರೆಸ್‌ನ ಬೆಂಬಲವಿಲ್ಲ. ಯಾವುದೇ ಕಾರಣಕ್ಕೂ ಕೆಜೆಪಿ ಜತೆ ಮೈತ್ರಿ ಇಲ್ಲ' ಎಂದು ವೀರಪ್ಪ ಮೊಯಿಲಿ ಹೇಳಿದರು. ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಸೂದೆಗಳು ಅಂಗೀಕಾರವಾಗುವ ವಿಶ್ವಾಸವಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವಿಚಾರ ಇಲ್ಲಿನ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಬಿಟ್ಟಿದ್ದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.