ADVERTISEMENT

ಅಭಿವೃದ್ಧಿ: ಕಾಸರಗೋಡಿನತ್ತ ಕೇಂದ್ರ, ಕೇರಳದ ಕಣ್ಣು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 18:30 IST
Last Updated 17 ನವೆಂಬರ್ 2012, 18:30 IST
ಅಭಿವೃದ್ಧಿ: ಕಾಸರಗೋಡಿನತ್ತ ಕೇಂದ್ರ, ಕೇರಳದ ಕಣ್ಣು
ಅಭಿವೃದ್ಧಿ: ಕಾಸರಗೋಡಿನತ್ತ ಕೇಂದ್ರ, ಕೇರಳದ ಕಣ್ಣು   

ಸೀತಾಂಗೋಳಿ (ಕಾಸರಗೋಡು): ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಇಲ್ಲಿ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಉತ್ಪಾದನೆಗಾಗಿ ಆರಂಭಿಸಿರುವ ಕಾರ್ಖಾನೆಯಲ್ಲಿ ಉಪಕರಣಗಳ ಉತ್ಪಾದನಾ ಕಾರ್ಯ ಆರಂಭವಾಗಿದ್ದು, 2ನೇ ಹಂತದ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಮುಂದಿನ ದಿನದಲ್ಲಿ ಏರೋಸ್ಪೇಸ್ ಘಟಕವಾಗಿ ಈ ಘಟಕ ಹೊರಹೊಮ್ಮಲಿರುವುದರಿಂದ ಕಾಸರಗೋಡು ದೇಶದ ಪ್ರಮುಖ ನೆಲೆಯಾಗಿ ಮಾರ್ಪಡಲಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.

ಇಲ್ಲಿನ ಎಚ್‌ಎಲ್ ಆವರಣದಲ್ಲಿ ಶನಿವಾರ ಯುದ್ಧತಂತ್ರ ವಿದ್ಯುನ್ಮಾನ ಕಾರ್ಖಾನೆಯನ್ನು (ಸ್ಟ್ರಾಟಜಿಕ್ ಎಲೆಕ್ಟ್ರಾನಿಕ್ಸ್ ಫ್ಯಾಕ್ಟರಿ) ಉದ್ಘಾಟಿಸಿ ಮಾತನಾಡಿದ ಅವರು, ಸುಕೋಯ್-30, ಎಲ್‌ಸಿಎ, ಮಿಗ್-27 ಯುದ್ಧ ವಿಮಾನಗಳ ಸುಧಾರಣ ಕಾರ್ಯವನ್ನು ಸಂಸ್ಥೆ ಕೈಗೊಂಡಿದ್ದು, ಎರಡನೇ ಹಂತದ ವಿಸ್ತರಣಾ ಕಾರ್ಯ ಕೊನೆಗೊಂಡಾಗ ಅವುಗಳಿಗೆ ಅಗತ್ಯವಾದ ಉಪಕರಣಗಳನ್ನು ಇಲ್ಲಿಯೇ ಉತ್ಪಾದಿಸಲಾಗುವುದು ಎಂದರು.

ಈ ಘಟಕದಲ್ಲಿ ಇದೀಗ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಅಗತ್ಯವಾದ ವಿಶೇಷ ಕಂಪ್ಯೂಟರ್‌ಗಳಾದ ಮಿಷನ್ ಕಂಪ್ಯೂಟರ್, ಡಿಸ್‌ಪ್ಲೇ ಪ್ರೊಸೆಸರ್, ರಡಾರ್ ಕಂಪ್ಯೂಟರ್, ಓಪನ್ ಆರ್ಕಿಟೆಕ್ಟ್ ಮಿಷನ್ ಕಂಪ್ಯೂಟರ್ ಮೊದಲಾದ ಉಪಕರಣಗಳನ್ನು ಉತ್ಪಾದಿಸುವ ಕಾರ್ಯ ಆರಂಭವಾಗಿದೆ. ಎರಡನೇ ಹಂತದಲ್ಲಿ ಅದರ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು. ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಸಹ ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಕೈಗಾರಿಕಾ ಅಭಿವೃದ್ಧಿ ಕೈಗೊಂಡಿರುವುದನ್ನು ಅವರು  ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.