ADVERTISEMENT

ಅಭ್ಯರ್ಥಿಗಳ ಆಯ್ಕೆ: ನಾಳೆ ಬಿಜೆಪಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:05 IST
Last Updated 10 ಮಾರ್ಚ್ 2014, 20:05 IST

ಬೆಂಗಳೂರು: ಬಾಕಿ ಇರುವ ಎಂಟು ಲೋಕ­ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡುವ ಸಲುವಾಗಿ ಇದೇ 12ರಂದು ಬಿಜೆಪಿಯ ಪ್ರಮು­ಖರು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಅಂದು ಪಟ್ಟಿಯನ್ನು ಅಂತಿಮಗೊಳಿಸಿ, 13ರಂದು ದೆಹಲಿ­ಯಲ್ಲಿ ನಡೆಯುವ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಿ­ದ್ದಾರೆ. ಅಂದೇ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ ಶಿವ­ಲಿಂಗಯ್ಯ ಅಥವಾ ಮಾಜಿ ಸಂಸದೆ ತೇಜ­ಸ್ವಿನಿ ಗೌಡ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ. ಕೋಲಾರ ಮೀಸಲು ಕ್ಷೇತ್ರ­ದಲ್ಲಿ ಜೆಡಿಎಸ್‌ ಭೋವಿ ಸಮಾಜಕ್ಕೆ ಸೇರಿದ ಕೆ.ಕೇಶವ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ ಅದೇ ಸಮು­ದಾಯದ ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ.

ಅವರ ಬದಲಿಗೆ, ಡಿ.ಎಸ್‌.­ವೀರಯ್ಯ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಗೊತ್ತಾಗಿದೆ. ಉಡುಪಿ– ಚಿಕ್ಕಮಗಳೂ­ರಿನಿಂದ ಶೋಭಾ ಕರಂದ್ಲಾಜೆ ಅಥವಾ ಪತ್ರಕರ್ತ ಪ್ರತಾಪ್ ಸಿಂಹ, ಬೀದರ್‌­ನಿಂದ ಗುರುಪಾದಪ್ಪ ನಾಗಮಾರಪಲ್ಲಿ ಅಥವಾ ಅವರ ಪುತ್ರ ಸೂರ್ಯಕಾಂತ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ತುಮಕೂರಿನಿಂದ ಬಸವರಾಜುಗೆ ಟಿಕೆಟ್‌ ನೀಡಬೇಕೆಂದು ಯಡಿಯೂ­ರಪ್ಪ ಪಟ್ಟುಹಿಡಿದಿದ್ದಾರೆ. ವರಿಷ್ಠರು ಒಪ್ಪದಿದ್ದರೆ ನಂದೀಶ್‌ ಅವರಿಗೆ ಟಿಕೆಟ್‌ ದೊರೆಯುವ ಸೂಚನೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.