ಹೊಸಕೋಟೆ: ಹೊಸಕೋಟೆಯ ಅಮಾನಿ ದೊಡ್ಡ ಕೆರೆ ಅಂಗಳ ತ್ಯಾಜ್ಯ ವಸ್ತುಗಳನ್ನು ಹಾಕುವ ಕಸದ ತೊಟ್ಟಿಯಾಗಿ ಪರಿವರ್ತಿತವಾಗಿದೆ. ಇದರಿಂದಾಗಿ ಹುಸ್ಕೂರು ಕೋಡಿ ಗ್ರಾಮದ ಗ್ರಾಮಸ್ಥರ ನೆಮ್ಮದಿಗೆ ಭಂಗ ಬಂದಿದೆ.
ಕೆರೆ ತುಂಬಿ ಹಲವು ವರ್ಷಗಳೇ ಕಳೆದಿರುವುದರಿಂದ ಕೆರೆ ಅಂಗಳದಲ್ಲಿ ಬೆಳೆ ಬೆಳೆಯಲಾಗದೆ ಹೆಚ್ಚಿನ ಹಿಡುವಳಿ ದಾರರು ತಮ್ಮ ಜಮೀನುಗಳನ್ನು ಮಾರಾಟ ಮಾಡಿದ್ದು ಇದು ತ್ಯಾಜ್ಯ ಹಾಕುವವರಿಗೆ ಅನುಕೂಲವಾಗಿದೆ.
ಹತ್ತಿರದ ಕಾಜಿಸೊಣ್ಣೆನಹಳ್ಳಿ ಗೇಟ್ ಬಳಿಯಲ್ಲಿರುವ ಕಂಪೆನಿಯ ಹಸಿತ್ಯಾಜ್ಯವನ್ನು ಕೆರೆ ಅಂಗಳದಲ್ಲಿ ತಂದು ಸುರಿಯಲಾಗುತ್ತಿದೆ. ಆ ತ್ಯಾಜ್ಯ ಬಹಳ ಬೇಗನೆ ಕೊಳೆತು ದುರ್ನಾತ ಬರುತ್ತಿದೆ. ಅಲ್ಲದೆ ಹೇರಳ ಪ್ರಮಾಣದಲ್ಲಿ ಕೊಳಕು ನೀರು ತ್ಯಾಜ್ಯದಿಂದ ಹರಿದು ಬರುತ್ತಿದೆ. ಇದರಿಂದಾಗಿ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಕೆರೆ ಅಂಗಳ ಅಷ್ಟೇ ಅಲ್ಲದೆ ಗ್ರಾಮದ ರೈತರ ಜಮೀನಿನಲ್ಲಿಯೂ ಪ್ಲಾಸ್ಟಿಕ್ ಸೇರಿದಂತೆ ಇತರ ಘನತ್ಯಾಜ್ಯ ರಾಶಿ ಬಿದ್ದಿದೆ. ಮಂಡೂರು ಗ್ರಾಮದಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸುರಿಯುವುದನ್ನು ಸ್ಥಗಿತಗೊಳಿಸುತ್ತಿದ್ದಂತೆ ಕಸದ ಲಾರಿಗಳು ರಾತ್ರಿ ವೇಳೆ ಕೆರೆ ಅಂಗಳದಲ್ಲಿ ಕಸ ಸುರಿದು ಹೋಗಲು ಆರಂಭಿಸಿದವು. ಜನತೆಯ ಪ್ರತಿಭಟನೆ, ವಿರೋಧದಿಂದಾಗಿ ಬಿಬಿಎಂಪಿ ಲಾರಿಗಳು ಕಸ ಸುರಿಯುವುದನ್ನು ನಿಲ್ಲಿಸಿದವು. ಕಾಟಾಚಾರಕ್ಕೆ ಮಣ್ಣಿನ ಹೊದಿಕೆ ಹಾಕ ಲಾಗಿದೆ. ಆದರೆ, ಸುರಿದ ಕಸದ ರಾಶಿ ಇದುವರೆಗೂ ತೆರವುಗೊಂಡಿಲ್ಲ. ಹಾಗೆಯೇ ಕೊಳೆಯುತ್ತಾ ಬಿದ್ದಿದೆ.
ಕಸ ವಿಲೇವಾರಿ ಮಾಡುವಂತೆ ದೊಡ್ಡಬನ್ನಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ‘ಈ ಸಮಸ್ಯೆಯನ್ನು ಬಿಬಿಎಂಪಿ ಬಗೆಹರಿಸಬೇಕು. ಪಾಲಿಕೆ ಅಧಿಕಾರಿಗಳ ಗಮನಕ್ಕೆ ತನ್ನಿ’ ಎಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಉತ್ತರಿಸಿದರು. ಬಳಿಕ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದು ಬಿಬಿಎಂಪಿಯ ಕಸವಲ್ಲ ಎಂದು ಸಮಜಾಯಿಷಿ ನೀಡಿದರು ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.
ಗ್ರಾಮ ಪಂಚಾಯ್ತಿ ಸಹ ಸರಿಯಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಒಂದು ವರ್ಷದಿಂದ ಚರಂಡಿಯ ಹೂಳನ್ನು ತೆಗೆದಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಔಷಧಿಯನ್ನೂ ಸಿಂಪಡಿಸುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಗಾಳಿ ಬೀಸಿದಾಗ ತ್ಯಾಜ್ಯ ವಸ್ತು ಹೊರಸೂಸುವ ದುರ್ನಾತದಿಂದ ಮನೆಯಲ್ಲಿ ಇರಲು ಆಗದಾಗಿದೆ. ಜತೆಗೆ ಸೊಳ್ಳೆ ನೊಣಗಳ ಕಾಟವು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ ಎನ್ನುತ್ತಾರೆ ಗೃಹಿಣಿ ರಾಧಮ್ಮ.
ರೈತರ ಜಮೀನಿನಲ್ಲಿ ಹಸಿತ್ಯಾಜ್ಯ: ಕಂಪೆನಿಯಿಂದ ದಿನವೂ ಹೊರಬೀಳುವ ಹಸಿತ್ಯಾಜ್ಯವನ್ನು ಕೆಲವು ರೈತರು ಗೊಬ್ಬರ ತಯಾರಿಸುವ ಉದ್ದೇಶದಿಂದ ಗದ್ದೆಗಳಿಗೆ ತಂದು ಹಾಕುತ್ತಿದ್ದಾರೆ. ಆದರೆ, ಆ ಹಸಿತ್ಯಾಜ್ಯದಿಂದ ಹೊರಬರುವ ದುರ್ವಾಸನೆಯಿಂದ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅವರು ದೂರಿದ್ದಾರೆ.
ಕೃಷ್ಣರಾಜಪುರ, ಭಟ್ಟರಹಳ್ಳಿ, ಹೂಡಿ, ಚೀಮಸಂದ್ರ ಗ್ರಾಮದ ಸುತ್ತಮುತ್ತಲಿನ ಖಾಸಗಿ ಕಂಪೆನಿಗಳ ತ್ಯಾಜ್ಯವನ್ನು ಕೆರೆ ಅಂಗಳಕ್ಕೆ ಸುರಿಯಲಾಗುತ್ತಿದೆ. ಈ ಕೆಲಸವನ್ನು ಕೆಲವು ಸ್ಥಳೀಯ ಕಸದ ಗುತ್ತಿಗೆದಾರರೇ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.