ಬೆಂಗಳೂರು: ನಟ ಶಿವರಾಜ್‌ಕುಮಾರ್ ಬೆಳ್ಳಿತೆರೆಗೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಬುಧವಾರದ ಸಂಜೆ ನಡೆದ ‘100ರ ಸರದಾರನಿಗೆ ಬೆಳ್ಳಿ ಹಬ್ಬದ ಸಂಭ್ರಮ’ ಸಮಾರಂಭವು ಅಭಿಮಾನಿಗಳಿಗೆ ಅಕ್ಷರಶಃ ಮಹಾಶಿವರಾತ್ರಿಯಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆ, ಜೈಕಾರ ಹಾಕಿ ‘ಶಿವ’ನ ಪ್ರೀತಿಗೆ ಪಾತ್ರರಾದರು.
ಕನ್ನಡ ಚಿತ್ರರಂಗದ ಮಟ್ಟಿಗೆ ಅಪರೂಪದ ಸಮಾರಂಭ ಇದಾಗಿತ್ತು. ನಟರೊಬ್ಬರ 25 ವರ್ಷಗಳ ಸಿನಿಪಯಣವನ್ನು ಸ್ಮರಿಸುವ ಸಮಾರಂಭ ನಡೆದಿದ್ದು ವಿಶೇಷ.
ಸಮಾರಂಭಕ್ಕೆ ತಾಯಿ ಪಾರ್ವತಮ್ಮ ರಾಜಕುಮಾರ್, ಅತ್ತೆ ನಾಗಮ್ಮ (ರಾಜಕುಮಾರ್ ಅವರ ತಂಗಿ), ಮಾವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ (ಪತ್ನಿಯ ತಂದೆ) ಹಾಗೂ ಸಹೋದರ ರಾಘವೇಂದ್ರ ರಾಜಕುಮಾರ್ ಚಾಲನೆ ನೀಡಿದರು.
‘ಆನಂದ್’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್ ಅವರು ಚೊಚ್ಚಲ ಚಿತ್ರದ ‘ಟುವ್ವಿ ಟುವ್ವಿ...’ ಗೀತೆಗೆ ಹೆಜ್ಜೆ ಹಾಕುವ ಮೂಲಕ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಶಿವರಾಜ್ 25 ವರ್ಷಗಳ ಹಿಂದೆ ಹಾಕಿದ ಹೆಜ್ಜೆಗಳನ್ನೇ ಮತ್ತೊಮ್ಮೆ ಹಾಕಿದರು. ಆ ಗೀತೆಯಲ್ಲಿ ಧರಿಸಿದ್ದ ವೇಷಭೂಷಣಗಳನ್ನು ಇಲ್ಲಿಯೂ ಬಳಸಿದ್ದು ವಿಶೇಷವಾಗಿತ್ತು.
ಮಗಳ ಜೊತೆ ನೃತ್ಯ: ‘ಅಂಡಮಾನ್’ ಚಿತ್ರದ ‘ಡ್ಯಾಡಿ ಮೈ ಲವ್‌ಲೀ ಡ್ಯಾಡಿ...’ ಗೀತೆಗೆ ಪುತ್ರಿ ನಿವೇದಿತಾ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. ಪ್ರಮುಖ ನಟ, ನಟಿಯರಾದ ಪುನೀತ್ ರಾಜಕುಮಾರ್, ಶಶಿಕುಮಾರ್, ಮಾಲಾಶ್ರೀ, ರಮೇಶ್, ಶ್ರುತಿ, ಬಾಲರಾಜ್, ಗುರುದತ್, ಅನುಪ್ರಭಾಕರ್ ಹಾಗೂ ಇತರರೊಡನೆ ಹೆಜ್ಜೆ ಹಾಕಿದರು.
ಅಂಬರೀಷ್, ಮುರಳಿ, ವಿಜಯ ರಾಘವೇಂದ್ರ, ದರ್ಶನ್, ಆದಿತ್ಯ, ಪೂಜಾಗಾಂಧಿ, ನವೀನ್ ಕೃಷ್ಣ, ಶ್ರೀನಗರ ಕಿಟ್ಟಿ, ರವಿಶಂಕರ್, ಸೃಜನ್ ಲೋಕೇಶ್, ವಿಜಯ್, ಪ್ರೇಮ್ ಇತರರು ವೇದಿಕೆಯ ಮೇಲೆ ಕಾಣಿಸಿಕೊಂಡರು.
ಗತ ವೈಭವ: ‘ಆನಂದ್’ ಚಿತ್ರದ ಮೂಲಕ ವೃತ್ತಿಜೀವನ ಆರಂಭಿಸಿದ ಶಿವರಾಜಕುಮಾರ್ ಅವರ ಸಿನಿಪಯಣವನ್ನು ನೆನಪಿಸುವ 10 ನಿಮಿಷಗಳ ವಿಶೇಷ ದೃಶ್ಯಾವಳಿಗಳು ಗಮನ ಸೆಳೆದವು.
ಸನ್ಮಾನ: ಶಿವರಾಜ್ ಜೊತೆ ಚಿತ್ರರಂಗ ಪ್ರವೇಶಿಸಿದ ರವಿಚಂದ್ರನ್ ಹಾಗೂ ರಮೇಶ್ ಅವರಿಗೂ ಸನ್ಮಾನ ಮಾಡಲಾಯಿತು. ಗೃಹ ಸಚಿವ ಆರ್.ಅಶೋಕ, ಸಾಹಿತಿ ಬರಗೂರು ರಾಮಚಂದ್ರಪ್ಪ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.