ADVERTISEMENT

ಅವಮಾನ ರಾಜೀನಾಮೆಗೆ ಮುಂದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 18:30 IST
Last Updated 13 ಜುಲೈ 2012, 18:30 IST

ಬೆಂಗಳೂರು: `ಸಚಿವನಾಗುವ ಅವಕಾಶ ಕೊನೆ ಗಳಿಗೆಯಲ್ಲಿ ಕೈತಪ್ಪಿದೆ. ಕ್ಷೇತ್ರದ ಜನರಿಗೆ ಅವಮಾನ ಆಗಿದೆ. ಇದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೇನೆ~ ಎಂದು ಕುಂದಾಪುರ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

`ವಿಧಾನ ಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಕಚೇರಿಯಲ್ಲಿ ಇಲ್ಲದ ಕಾರಣ ಕಾರ್ಯದರ್ಶಿ ಪಿ.ಓಂಪ್ರಕಾಶ ಅವರಿಗೆ ರಾಜೀನಾಮೆ ಪತ್ರ ನೀಡಲು ಹೋಗಿದ್ದೆ. ಆದರೆ ಅವರು, ನಾನು ರಾಜೀನಾಮೆ ಪತ್ರ ಸ್ವೀಕರಿಸಲು ಬರುವುದಿಲ್ಲ. ಸ್ವೀಕರ್ ಅವರಿಗೆ ಖುದ್ದಾಗಿ ನೀಡಿ ಎಂದು ಸಲಹೆ ಮಾಡಿದ್ದಾರೆ~ ಎಂದು ಶ್ರೀನಿವಾಸ ಶೆಟ್ಟಿ ಅವರು ಸುದ್ದಿಗಾರರಿಗೆ ತಿಳಿಸಿದರು.

`ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಮೂರು ಬಾರಿ ಶಾಸಕನಾಗಿ ಆರಿಸಿ ಬಂದಿದ್ದರೂ ನಾನಾಗಿಯೇ ಸಚಿವ ಸ್ಥಾನ ಕೊಡಿ ಎಂದು ಕೇಳಿರಲಿಲ್ಲ. ಸಚಿವರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕೈಬಿಟ್ಟಿದ್ದಾರೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಭವನದಲ್ಲಿ ಲಾಲಾಜಿ ಮೆಂಡನ್, ಕೆ.ರಘುಪತಿ ಭಟ್, ಕೆ.ಲಕ್ಷ್ಮಿನಾರಾಯಣ ಅವರು ಶ್ರೀನಿವಾಸ ಶೆಟ್ಟಿ ಅವರೊಂದಿಗೆ ಚರ್ಚೆ ನಡೆಸಿ, ಅವರ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಮಧ್ಯೆ ಶಾಸಕರ ಭವನಕ್ಕೆ ತೆರಳಿದ ಸಚಿವ ಸಿ.ಟಿ.ರವಿ ಅವರು ರಾಜೀನಾಮೆ ನೀಡದಂತೆ ಶ್ರೀನಿವಾಸ ಶೆಟ್ಟಿ ಅವರ ಮನವೊಲಿಸಲು ಪ್ರಯತ್ನಿಸಿದರು.

ಶೆಟ್ಟರ್ ಮನವಿ: ರಾಜೀನಾಮೆ ನಿರ್ಧಾರ ಕೈಬಿಡುವಂತೆ ಶ್ರೀನಿವಾಸ ಶೆಟ್ಟಿ ಅವರಿಗೆ ಮನವಿ ಮಾಡಿರುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.

ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ಮಾದರಿ ಶಾಸಕ ಶ್ರೀನಿವಾಸ ಶೆಟ್ಟಿ ಅವರ ಬಗ್ಗೆ ನನಗೆ ಅಭಿಮಾನವಿದೆ. ನಿಮಗಿರುವ ಅಸಮಾಧಾನ ಕುರಿತು ಮಾತನಾಡೋಣ, ಬನ್ನಿ ಎಂದು ಕರೆದಿದ್ದೇನೆ. ಮಾತುಕತೆಗೆ ಅವರೂ ಒಪ್ಪಿದ್ದಾರೆ~ ಎಂದು ತಿಳಿಸಿದರು.
 ಆದಷ್ಟು ಬೇಗ ಅವರೊಂದಿಗೆ ಚರ್ಚಿಸಿ ಗೊಂದಲವನ್ನು ನಿವಾರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.