ADVERTISEMENT

ಅವೆನ್ಯೂ ರಸ್ತೆ ಸಂಚಾರ: ತಾತ್ಕಾಲಿಕ ಬಂದ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಬೆಂಗಳೂರು: ಸದಾ ವಾಹನಗಳು ಹಾಗೂ ನಾಗರಿಕರ ದಟ್ಟಣೆಯಿಂದ ಗಿಜಿಗುಟ್ಟುತ್ತಿದ್ದ ನಗರದ ಪ್ರಮುಖ ರಸ್ತೆಯಾದ ಅವೆನ್ಯೂ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ರಸ್ತೆಯ ಹಳೆಯ ಒಳಚರಂಡಿ ಮಾರ್ಗಗಳಿಗೆ ಕಾಯಕಲ್ಪ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.

ಅವೆನ್ಯೂ ರಸ್ತೆಯು ನಗರದ ಹಳೆಯ ಪ್ರದೇಶ. ವಾಣಿಜ್ಯ ಚಟುವಟಿಕೆ ಕೇಂದ್ರವಾದ ಇಲ್ಲಿನ ರಸ್ತೆ ಕಿರಿದಾಗಿದೆ. ಇಲ್ಲಿನ ಬಹುತೇಕ ಸ್ಥಳಗಳಲ್ಲಿ ತ್ಯಾಜ್ಯ ನೀರಿನ ಕೊಳವೆ ಮಾರ್ಗಗಳು ಹಳೆಯದಾಗಿದ್ದು, ಪ್ರದೇಶದ ಬೆಳವಣಿಗೆಯಾದಂತೆ ಕೊಳವೆ ಮಾರ್ಗಗಳ ಮೇಲಿನ ಒತ್ತಡ ಹೆಚ್ಚಾಗಿತ್ತು. ಇದರಿಂದಾಗಿ ಅನೇಕ ಸ್ಥಳಗಳಲ್ಲಿ ಕೊಳವೆ ಶಿಥಿಲಗೊಂಡು ಒಡೆದು ಸೋರಿಕೆಯಾಗಿ ಸರಾಗವಾಗಿ ನೀರು ಹರಿಯುವಿಕೆಗೆ ಅಡಚಣೆಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ರಸ್ತೆಯಲ್ಲಿದ್ದ 175 ರಿಂದ 200 ಎಂಎಂ ವ್ಯಾಸದ ಹಳೆಯ ಕೊಳವೆ ಮಾರ್ಗಗಳನ್ನು ಬದಲಿಸಿ 300 ಎಂಎಂ ವ್ಯಾಸದ ಎನ್‌ಪಿ-3 ಆರ್‌ಸಿಸಿ ಕೊಳವೆ ಮಾರ್ಗವನ್ನು ಅಳವಡಿಸಲಾಗುತ್ತಿದೆ. ಕಾಮಗಾರಿಯು ರಾಗಿಪೇಟೆ ವೃತ್ತದಿಂದ ಕಬ್ಬನ್ ಪೇಟೆ ಮುಖ್ಯ ರಸ್ತೆವರೆಗೆ 700 ಮೀಟರ್ ಉದ್ದ ನಡೆಯಲಿದೆ. 
ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ತ್ವರಿತಗತಿಯಲ್ಲಿ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದು ಮಂಡಲಿಯ ಉದ್ದೇಶ. 

ಕಾಮಗಾರಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಲಮಂಡಲಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.