ADVERTISEMENT

ಅವ್ವಾಯಿಗೆ ಷರತ್ತಿನ ಜಾಮೀನು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:46 IST
Last Updated 15 ಡಿಸೆಂಬರ್ 2012, 19:46 IST

ಬೆಂಗಳೂರು: ಹೋಟೆಲ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸುಧಾಮ ನಗರ ವಾರ್ಡ್ ಸದಸ್ಯೆ, ಕಾಂಗ್ರಸ್‌ನ ಅವ್ವಾಯಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಷರತ್ತಿನ ಜಾಮೀನು ನೀಡಿದೆ.

ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ನೀಡಬೇಕು. ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಬೆದರಿಸಲು ಯತ್ನಿಸಬಾರದು. ಅನುಮತಿ ಇಲ್ಲದೆ ರಾಜ್ಯದಿಂದ ಹೊರಗೆ ತೆರಳಬಾರದು ಎಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಆದೇಶಿಸಿದರು.

`ಆರೋಪಿಗಳು ಪ್ರತಿನಿತ್ಯ ಯಾರನ್ನು ಸಂಪರ್ಕಿಸುತ್ತಾರೆ ಎಂಬುದನ್ನು ಬರೆದಿಡಬೇಕು. ಇದನ್ನು ತನಿಖಾಧಿಕಾರಿಗೆ ನೀಡಬೇಕು' ಎಂದೂ ನ್ಯಾಯಪೀಠ ನಿರ್ದೇಶನ ನೀಡಿತು. ಅವ್ವಾಯಿ ಅವರು ತನಿಖಾಧಿಕಾರಿ ಕಚೇರಿಗೆ ಪ್ರತಿ ಸೋಮವಾರ ಹಾಜರಾಗಿ, ಸಹಿ ಮಾಡಬೇಕು. ದೂರುದಾರರಿಗೆ ಬೆದರಿಕೆ ಒಡ್ಡುವ ಅಥವಾ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ಎಚ್ಚರಿಕೆ ನೀಡಿತು.

ಅವ್ವಾಯಿ ವಿರುದ್ಧ ದಾಖಲಾದ ದೂರು ರಾಜಕೀಯ ಪ್ರೇರಿತ ಎಂದು ಅವರ ಪರ ವಕೀಲರು ವಾದಿಸಿದರು. ಇದನ್ನು ಒಪ್ಪದ ನ್ಯಾಯಪೀಠ, `ದೂರುದಾರರು ಭಯದಿಂದ ತಮ್ಮ ಹೋಟೆಲನ್ನೇ ಮುಚ್ಚಿದ್ದರು. ಅವರಿಗೆ ರಾಜಕೀಯ ಸಂಪರ್ಕ ಇದ್ದಿದ್ದರೆ, ಅಡಗುವ ಪ್ರಯತ್ನ ಏಕೆ ಮಾಡುತ್ತಿದ್ದರು?' ಎಂದು ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT