ADVERTISEMENT

ಅ.20ರಿಂದ ನಗರದಲ್ಲಿ ಭಗವದ್ಗೀತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಭಗವದ್ಗೀತಾ ಅಭಿಯಾನದ ಕರ್ನಾಟಕ ಘಟಕವು ಬೆಂಗಳೂರು ನಗರದಲ್ಲಿ ಅಂತಿಮ ಹಂತದ ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಂಡಿದೆ~ ಎಂದು ಸೋಂದ ಸ್ವರ್ಣವಲ್ಲೆ ಮಠದ ಗಂಗಾಧರೇಶ್ವರ ಸ್ವಾಮೀಜಿ ಇಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈಗಾಗಲೇ ರಾಜ್ಯಾದ್ಯಂತ ಕೈಗೊಂಡಿದ್ದ ಅಭಿಯಾನವು ಸುಮಾರು 24 ಲಕ್ಷ  ಜನರನ್ನು ತಲುಪಿದೆ. ಈವರೆಗೂ 24 ಲಕ್ಷ ಭಗವದ್ಗೀತೆ ಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು, ಅಭಿಯಾನ ಯಶಸ್ವಿಯಾಗಿದೆ~ ಎಂದರು.

  `ಭಗವದ್ಗೀತೆಯ ಅಭಿಯಾನದ ಬಗ್ಗೆ ಸಾಕಷ್ಟು ಗೊಂದಲವಿದೆ. ಇದು ಯಾವುದೇ ಸರ್ಕಾರಿ ಕಾರ್ಯಕ್ರಮವಲ್ಲ ಹಾಗೂ ಕಡ್ಡಾಯವಾಗಿ ಭಾಗವಹಿಸುವಂತೆ ಯಾರಿಗೂ ಒತ್ತಡ ಹೇರಿಲ್ಲ. ಸರ್ಕಾರದಿಂದ ಅನುಮತಿ ಪಡೆದೇ ಅಭಿಯಾನ ಕೈಗೊಂಡಿದ್ದೇವೆ.ಯಾರಿಗೂ ಧಕ್ಕೆ ತರದಂತೆ ಅಭಿಯಾನ ನಡೆಸಲು ಸರ್ಕಾರ ಸೂಚಿಸಿದೆ. ಸರ್ಕಾರಿಂದ ಯಾವುದೇ ಆರ್ಥಿಕ ಸಹಾಯ ಪಡೆದಿಲ್ಲ, ಕೇಳಿಯೂ ಇಲ್ಲ. ಇದರಿಂದ ಮಠಕ್ಕೆ ಆರ್ಥಿಕ ನಷ್ಟವಾಗಿದೆ~ ಎಂದು ಸ್ಪಷ್ಟನೆ ನೀಡಿದರು. 

ಧರ್ಮಗ್ರಂಥವಲ್ಲ: ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವಲ್ಲ. ಅದು ಮಾನವೀಯತೆಯ ಗ್ರಂಥ. ಗ್ರಂಥದಲ್ಲಿ ಎಲ್ಲಿಯೂ ಹಿಂದೂ ಧರ್ಮವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿಲ್ಲ ಎಂದರು.

ಈ ಅಭಿಯಾನವನ್ನು ಕೈಗೊಂಡಿರುವುದು ಸೂಕ್ತವೇ? ಎಲ್ಲಾ ಧರ್ಮ ಗ್ರಂಥಗಳನ್ನು ಬೋಧಿಸುವ ಅಭಿಯಾನ ಆರಂಭವಾದರೆ? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು,`ಒಳ್ಳೆಯ ಸಂದೇಶವನ್ನು ಸಾರುವ ಯಾವುದೇ ಧಾರ್ಮಿಕ ಗ್ರಂಥವನ್ನು ಬೋಧಿಸುವುದು ತಪ್ಪಲ್ಲ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಅಂತಹ ಪರಿಸ್ಥಿತಿ ಬಂದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ~ ಎಂದು ಪ್ರತಿಕ್ರಿಯೆ ನೀಡಿದರು.

 ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಪ್ರೋತ್ಸಾಹ ದೊರೆತಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಭಗವದ್ಗೀತೆ ಅಭಿಯಾನ ನಡೆಸಲು ಆಹ್ವಾನ ನೀಡಿವೆ. ಈ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು. 

ಅಭಿಯಾನದ ಉದ್ಘಾಟನೆ ಅಕ್ಟೋಬರ್ 29ರಂದು ನಗರದಲ್ಲಿ ನಡೆಯಲಿದೆ. ಇನ್ನೂ ಉದ್ಘಾಟನಾ ಸ್ಥಳ ನಿಗದಿಯಾಗಿಲ್ಲ. ಎರಡು ಹಂತಗಳಲ್ಲಿ ಅಭಿಯಾನ ನಡೆಯಲಿದೆ. 2012ರ ಜನವರಿ 7,8ರಂದು ನಗರದ ಅರಮನೆ ಮೈದಾನದಲ್ಲಿ ಭಗವದ್ಗೀತೆಯ ಮಹಾಸಮರ್ಪಣೆ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.