ADVERTISEMENT

ಆಟಿಸಂ ಪೀಡಿತ ಮಗನ ಕೊಂದು ತಂದೆ ಆತ್ಮಹತ್ಯೆ

ಕೆಎಸ್‌ಆರ್‌ಪಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದ ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:40 IST
Last Updated 26 ಮಾರ್ಚ್ 2018, 19:40 IST
ಮಗ ಸಂಚಿತ್‌ ಜತೆ ವಿಶ್ವನಾಥ್‌
ಮಗ ಸಂಚಿತ್‌ ಜತೆ ವಿಶ್ವನಾಥ್‌   

ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಹೆಡ್ ಕಾನ್‌ಸ್ಟೆಬಲ್ ವಿಶ್ವನಾಥ್‌, ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ತನ್ನ 8 ವರ್ಷದ ಮಗ ಸಂವಿತ್‌ನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನ ಪಡೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ವಿಶ್ವನಾಥ್‌, ಎರಡು ತಿಂಗಳ ಹಿಂದಷ್ಟೇ ಬಡ್ತಿ ಹೊಂದಿದ್ದರು. ಮಗನಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲೆಂದು ನಗರಕ್ಕೆ ಕರೆದುಕೊಂಡು ಬಂದಿದ್ದರು. ಕಾಟನ್‌ಪೇಟೆಯ ‘ವಸಂತ್‌ರಾಜ್ ಪ್ಯಾರಡೈಸ್ ಡಿಲಕ್ಸ್‌’ ವಸತಿಗೃಹದ ಕೊಠಡಿಯಲ್ಲಿ ಉಳಿದುಕೊಂಡಿದ್ದರು.

ಭಾನುವಾರ ಕೊಠಡಿ ಬಾಗಿಲು ಹಾಕಿಕೊಂಡಿದ್ದ ಅವರು, ಸೋಮವಾರ ಮಧ್ಯಾಹ್ನವಾದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ವಸತಿಗೃಹದ ಸಿಬ್ಬಂದಿ, ಬಾಗಿಲು ಒಡೆದು ನೋಡಿದಾಗ ವಿಷಯ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಹತ್ತು ವರ್ಷಗಳ ಹಿಂದೆ ದಿವ್ಯಾ ಎಂಬುವರನ್ನು ಮದುವೆಯಾಗಿದ್ದ ವಿಶ್ವನಾಥ್, ಮೈಸೂರಿನ ನೇತಾಜಿ ನಗರದಲ್ಲಿ ನೆಲೆಸಿದ್ದರು. ದಂಪತಿಗೆ ಸಂವಿತ್ ಒಬ್ಬನೇ ಮಗನಾಗಿದ್ದ. ಆತನಿಗೆ ಎರಡು ವರ್ಷಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು. ಮಾತನಾಡುವುದನ್ನೂ ನಿಲ್ಲಿಸಿದ್ದ. ಹಲವು ವೈದ್ಯರ ಬಳಿ ತೋರಿಸಿದರೂ ಗುಣಮುಖನಾಗಿರಲಿಲ್ಲ. ಅದರಿಂದ ದಂಪತಿ ನೊಂದಿದ್ದರು’ ಎಂದರು.

‘ಶನಿವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ವಿಶ್ವನಾಥ್‌, ಪೊಲೀಸ್‌ ಗುರುತಿನ ಚೀಟಿ ನೀಡಿ ಕೊಠಡಿ ಪಡೆದಿದ್ದರು. ಅದೇ ಕೊಠಡಿಯಲ್ಲೇ ಮಗನನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ನಂತರ ತಾವೂ ವೈರ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ನಾಪತ್ತೆ ದೂರು ದಾಖಲು: ಉದ್ಯಾನಕ್ಕೆ ಹೋಗಿಬರುವುದಾಗಿ ಪತ್ನಿಗೆ ತಿಳಿಸಿ ಮಗನ ಸಮೇತ ಮನೆಯಿಂದ ಹೊರಬಂದಿದ್ದ ವಿಶ್ವನಾಥ್‌, ರಾತ್ರಿಯಾದರೂ ವಾಪಸ್‌ ಹೋಗಿರಲಿಲ್ಲ. ಗಾಬರಿಗೊಂಡಿದ್ದ ಪತ್ನಿ, ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ನಾಪತ್ತೆ ಬಗ್ಗೆ ವಿಶ್ವನಾಥ್‌ ಮಾವ (ನಿವೃತ್ತ ಪಿಎಸ್‌ಐ) ಪಿ.ಬಸಪ್ಪ ಸ್ಥಳೀಯ ಠಾಣೆಗೆ ದೂರು ನೀಡಿದ್ದರು.

‘ಅಳಿಯನ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಅದರ ಲೊಕೇಶನ್‌ ತೆಗೆಸಿದಾಗ, ನಂಜನಗೂಡಿನಲ್ಲಿರುವ ಮಾಹಿತಿ ಸಿಕ್ಕಿತ್ತು. ಅಲ್ಲಿಯ ಬಸ್‌ ನಿಲ್ದಾಣಕ್ಕೆ ಹೋಗಿ ನೋಡಿದರೂ ಆತ ಪತ್ತೆಯಾಗಿಲ್ಲ. ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣ ಬಳಿ ಅವರ ಬೈಕ್‌ ಸಿಕ್ಕಿದೆ’ ಎಂದು ದೂರಿನಲ್ಲಿ ಬಸಪ್ಪ ತಿಳಿಸಿದ್ದರು.

‘ಕೆಲಸದ ಒತ್ತಡ: ಮಗನ ಸ್ಥಿತಿ ಅರ್ಥವಾಗಲಿಲ್ಲ’

ಕೊಠಡಿಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ‘ವರ್ಷವೆಲ್ಲ ನೀನು(ಪತ್ನಿ) ಮಗನನ್ನು ಸಲುಹಿದೆ. ನಾನು ಕೆಲಸದಲ್ಲೇ ಮುಳುಗಿದ್ದರಿಂದ ಆತನ ಆರೋಗ್ಯದ ವಾಸ್ತವ ಸ್ಥಿತಿಯ ಅರಿವಾಗಲಿಲ್ಲ. ಈ ಎರಡು ದಿನ ಮಗನ ಕಷ್ಟವನ್ನು ನನ್ನಿಂದ ನೋಡಲಾಗಲಿಲ್ಲ. ನಾನು ಮಗನನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಕ್ಷಮಿಸಿ ಬಿಡು. ನೀನು ಚೆನ್ನಾಗಿ ಜೀವನ ನಡೆಸು’ ಎಂದು ವಿಶ್ವನಾಥ್‌ ಪತ್ರದಲ್ಲಿ ಬರೆದಿರುವುದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.