ADVERTISEMENT

ಆಟೊಗೆ ಕಾರು ಡಿಕ್ಕಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:57 IST
Last Updated 2 ಜೂನ್ 2013, 19:57 IST

ಬೆಂಗಳೂರು: ಎಂ.ಜಿ.ರಸ್ತೆಯ ಮೆಯೋಹಾಲ್ ಜಂಕ್ಷನ್ ಸಮೀಪ ಶನಿವಾರ ರಾತ್ರಿ ಕಾರೊಂದು ಆಟೊಗೆ ಡಿಕ್ಕಿ ಹೊಡೆದು ದೀಪಕ್ (20) ಎಂಬುವರು ಮೃತಪಟ್ಟಿದ್ದು, ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಅಫ್ಜಲ್‌ಖಾನ್ (47) ಎಂಬುವರು ಸಾವನ್ನಪ್ಪಿದ್ದಾರೆ.

ಹಲಸೂರು ಬಳಿಯ ಮರ್ಫಿ ಟೌನ್ ನಿವಾಸಿಯಾದ ದೀಪಕ್, ರೆಸಿಡೆನ್ಸಿ ರಸ್ತೆಯ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದರು. ರಾತ್ರಿ ಕೆಲಸ ಮುಗಿದ ನಂತರ ಅವರು ಕಾರ್ತಿಕ್ ಎಂಬ ಸಹೋದ್ಯೋಗಿಯೊಂದಿಗೆ ಆಟೊದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಆಟೊ ಚಾಲಕ ಯೂನಿಸ್ ಅಲಿ, ಮೆಯೋಹಾಲ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಳ್ಳುವ ಯತ್ನದಲ್ಲಿದ್ದಾಗ ಟ್ರಿನಿಟಿ ವೃತ್ತದ ಕಡೆಯಿಂದ ಬಂದ ಕಾರು ಆಟೊಗೆ ಡಿಕ್ಕಿ ಹೊಡೆದಿದೆ. ಆಟೊ ಮಗುಚಿ ಬಿದ್ದು ತೀವ್ರವಾಗಿ ಗಾಯಗೊಂಡ ದೀಪಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ತಿಕ್ ಅವರ ತಲೆಗೆ ಪೆಟ್ಟಾಗಿದೆ ಮತ್ತು ಚಾಲಕ ಅಲಿ ಅವರ ಬಲಗಾಲು ಮುರಿದಿದೆ. ಅವರಿಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆಟೊಗೆ ಡಿಕ್ಕಿ ಹೊಡೆದ ಐಷಾರಾಮಿ  ಕಾರಿನ ಮಾಲೀಕರು ಎಲೆಕ್ಟ್ರಾನಿಕ್‌ಸಿಟಿ ನಿವಾಸಿ ಎಂದು ಗೊತ್ತಾಗಿದೆ ಅಶೋಕನಗರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಜಗಜೀವನರಾಂನಗರ 2ನೇ ಮುಖ್ಯರಸ್ತೆ ನಿವಾಸಿಯಾದ ಅಫ್ಜಲ್‌ಖಾನ್, ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಗುದ್ದಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಅವರು ಚಾಮರಾಜಪೇಟೆಯಲ್ಲಿ ಸ್ನೇಹಿತರನ್ನು ಭೇಟಿಯಾಗಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.