ADVERTISEMENT

ಆಟೊ ಚಾಲಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:05 IST
Last Updated 23 ಅಕ್ಟೋಬರ್ 2011, 19:05 IST

ಬೆಂಗಳೂರು: ಕೆಲ ಆಟೊ ಚಾಲಕರು ಪ್ರಯಾಣಿಕರೊಂದಿಗೆ ಸೂಕ್ತವಾಗಿ ವರ್ತಿಸುವುದಿಲ್ಲ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಸೇರಿದಂತೆ ಇತರ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಲು ಸಂಚಾರ ಪೊಲೀಸ್ ವಿಭಾಗ ಮತ್ತು ಭಾರತೀಯ ಉದ್ಯೋಗ ತರಬೇತಿ ಕೇಂದ್ರ (ಐಐಜೆಟಿ)ದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಕೌಶಲ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಮಾತನಾಡಿ, ಪ್ರಯಾಣಿಕರೊಂದಿಗೆ ಸೂಕ್ತ ಸಂವಾದ ಮತ್ತು ಭದ್ರತೆ ಆಟೊ ಚಾಲಕರ ಕಾರ್ಯನಿರ್ವಹಣೆಯಲ್ಲಿ ಮುಖ್ಯವಾದುದು. ಈ ಹಿನ್ನೆಲೆಯಲ್ಲಿ ಆಟೊ ಚಾಲಕರಿಗೆ ತರಬೇತಿ ಮುಖ್ಯವಾಗಿದೆ. ಇದಕ್ಕೆ ಖಾಸಗಿ ಸಂಸ್ಥೆಗಳು ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ತರಬೇತಿ ರಾಜ್ಯದ ಇತರ ಚಾಲಕರ ಸಂಘಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.

ಆಟೊ ಪ್ರೀಪೇಡ್ ಸೇವೆ: ತಿಂಗಳಿಗೊಂದರಂತೆ ನಗರದ ಹಲವೆಡೆ ಪ್ರೀಪೇಡ್ ಆಟೊ ನಿಲ್ದಾಣಗಳನ್ನು ಆರಂಭಿಲು ಉದ್ದೇಶಿಸಲಾಗಿದೆ. ಅಗತ್ಯ ಬಿದ್ದರೆ ಒಂದಕ್ಕಿಂತಲೂ ಹೆಚ್ಚು ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆಯೂ ಇದೆ ಎಂದು ಹೇಳಿದರು.

ತರಬೇತಿಯಲ್ಲಿ ಭಾಗವಹಿಸಿದ್ದವರಿಗೆ ಚಾಲಕರಿಗೆ ಪ್ರಮಾಣಪತ್ರಗಳನ್ನೂ ವಿತರಿಸಿದರು. ಈ ಇಡೀ ತರಬೇತಿ ಶಿಬಿರದಲ್ಲಿ ಸಂಚಾರ ಪೊಲೀಸರು ತಮಗನ್ನಿಸಿದ್ದನ್ನು ಹೇಳಿದರೇ ಹೊರತು ಆಟೊ ಚಾಲಕರ ನೈಜ ಸಮಸ್ಯೆಗಳನ್ನು ಅರಿತುಕೊಳ್ಳುವ ಯತ್ನ ಮಾಡಲಿಲ್ಲ ಎಂಬುದು ಸಭೆಯ ನಂತರ ಆಟೊ ಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.