ADVERTISEMENT

ಆಟೊ ದರ ಹೆಚ್ಚಳ: ಮೊದಲ ದಿನದ ಗೊಂದಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:19 IST
Last Updated 20 ಡಿಸೆಂಬರ್ 2013, 20:19 IST

ಬೆಂಗಳೂರು: ನಗರದಲ್ಲಿ ಶುಕ್ರವಾರದಿಂದ ಆಟೊ ಪ್ರಯಾಣ ದರದಲ್ಲಿ ಹೆಚ್ಚಳವಾಗಿದ್ದು,  ಮೊದಲ 1.9 ಕಿ.ಮೀಗೆ (ಕನಿಷ್ಠ) ₨21 ನೀಡುತ್ತಿದ್ದ  ಪ್ರಯಾಣಿಕರು ಇದೀಗ ₨ 25 ನೀಡಬೇಕಾಗಿದೆ. ನಂತರದ ಪ್ರತಿ ಕಿ.ಮೀಗೆ ₨ 11 ನೀಡುತ್ತಿದ್ದವರು ಇದೀಗ ಪ್ರಯಾಣ ದರ ಹೆಚ್ಚಳದಿಂದಾಗಿ ₨13 ನೀಡಬೇಕಾಗಿದೆ.

ಪ್ರಯಾಣ ದರ ಹೆಚ್ಚಳದ ಮೊದಲನೇ ದಿನವಾದ ಶುಕ್ರವಾರ ಪ್ರಯಾಣಿರು ಆಟೊ ಚಾಲಕರೊಂದಿಗೆ ಚೌಕಾಸಿಗೆ ಇಳಿದಿದ್ದ ದೃಶ್ಯಗಳು ನಗರದಲ್ಲಿ ಸಾಮಾನ್ಯವಾಗಿದ್ದವು. ವಾಹದಲ್ಲಿ ದರ ಪಟ್ಟಿ ಅಳವಡಿಸಿಕೊಳ್ಳದ ಹಾಗೂ ಹೊಸ ದರಕ್ಕೆ ಅನುಗುಣವಾಗಿ ಮೀಟರ್‌ ಹೊಂದಿಸಿಕೊಳ್ಳದ (ಕ್ಯಾಲಿಬರೇಟ್) ಚಾಲಕರು, ಪ್ರಯಾಣಿಕರಿಂದ ಬಲವಂತವಾಗಿಯೇ ಮೀಟರ್‌ಗಿಂತ ₨ 20 ರಿಂದ ₨ 30 ಹೆಚ್ಚಿನ ದರ ಪಡೆಯುತ್ತಿದ್ದರು.

‘ಆಟೊ ದರ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲದ ಕಾರಣ ಮೊದಲ ದಿನ ಕೆಲವೆಡೆ ಪ್ರಯಾಣಿಕರು ಗೊಂದಲಕ್ಕೊಳಗಾಗಿರುವುದು ವರದಿಯಾಗಿದೆ. ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ  ಪರಿಷ್ಕೃತ ದರ ಪಟ್ಟಿ ಅಳವಡಿಸಿಕೊಳ್ಳದ ಹಾಗೂ ಮೀಟರ್‌ಗಳನ್ನು ಕ್ಯಾಲಿಬರೆಟ್‌ ಮಾಡದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಮೂರ್ನಾಲ್ಕು ಆಟೊಗಳಲ್ಲಿ ಪರಿಷ್ಕೃತ ದರ ಪಟ್ಟಿ ಇರಲಿಲ್ಲ. ಆ ಆಟೊದಲ್ಲಿ ಪ್ರಯಾಣಿಸಿದರೆ ಮನಬಂದಂತೆ ದರ ವಸೂಲಿ ಮಾಡುತ್ತಾರೆ ಎಂಬ ಕಾರಣಕ್ಕೆ ಪರಿಷ್ಕೃತ ದರ ಪಟ್ಟಿ ಅಳವಡಿಸಿದ್ದ ಆಟೊದಲ್ಲೇ ಪ್ರಯಾಣಿಸಿದೆ.

ಮೊದಲಿಗಿಂತ ₨ 25 ಹೆಚ್ಚುವರಿ ದರ ಕೊಟ್ಟು ಪ್ರಯಾಣಿಸಬೇಕಾಗಿದೆ’ ಎಂದು ಅನುಪಮಾ ಎಂಬುವರು ಅಳಲು ತೋಡಿಕೊಂಡರು.
‘ಇಂದಿರಾನಗರದಿಂದ ಎಂ.ಜಿ.ರಸ್ತೆಗೆ ಹೋಗಲು ಆಟೊ ಚಾಲಕರೊಬ್ಬರಿಗೆ ವಿಚಾರಿಸಿದೆ ಹೊಸ ದರ ₨ 110 ಆಗುತ್ತದೆ ಎಂದರು. ಅವರ ಬಳಿ ಪರಿಷ್ಕೃತ ಪಟ್ಟಿಯೂ ಇರಲಿಲ್ಲ’ ಎಂದು ಮತ್ತೊಬ್ಬ ಪ್ರಯಾಣಿಕ ರಾಕೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.