ADVERTISEMENT

ಆಟೊ ಬಳಕೆ ಬದಲು ನ್ಯಾನೊ ಕಾರು

ಪ್ರಯಾಣಿಕರ ಸುರಕ್ಷತೆಗೆ ಬಿಬಿಎಂಪಿ ಆಯುಕ್ತರ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:49 IST
Last Updated 18 ಡಿಸೆಂಬರ್ 2013, 19:49 IST

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ಆಟೊ ರಿಕ್ಷಾಗಳಿಗೆ ಬದಲಾಗಿ ಟಾಟಾ ನ್ಯಾನೊ ಇಲ್ಲವೆ ಇದೇ ಮಾದರಿ ವಾಹನಗಳನ್ನು ಬಳಸುವ ಕುರಿತು ಆಲೋಚಿಸಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.ಲಕ್ಷ್ಮಿನಾರಾಯಣ ಸಲಹೆ ನೀಡಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಭಾಭವನದಲ್ಲಿ ಸಾರಿಗೆ ಸಚಿವ ಆರ್‌. ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ರಾಜ್ಯ ರಸ್ತೆ ಸುರಕ್ಷತಾ ಮಂಡಳಿ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾನೊದಂತಹ ವಾಹನಗಳನ್ನು ಖರೀದಿಸಿ ಸಾರಿಗೆ ಸೌಲಭ್ಯ ನೀಡಲು ಮುಂದೆ ಬರುವ ಅರ್ಜಿದಾರರಿಗೆ ಸರ್ಕಾರದಿಂದ ಸಹಾಯಧನ ನೀಡಲು ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದರು.

ಮೋಟಾರು ವಾಹನ ಕಾಯ್ದೆ ೧೯೮೮ರ ನಿಯಮಗಳಲ್ಲಿ ಕಲ್ಪಿಸಲಾದ ಅವಕಾಶಗಳನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.

ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ (ಸಂಚಾರ) ಬಿ.ದಯಾನಂದ,  ರಾಜ್ಯದಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವಾಹನ ಚಾಲನಾ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದಲ್ಲಿ ಚಾಲನಾ ತರಬೇತಿಗೆ ತುಂಬಾ ಉಪಯುಕ್ತ ಆಗುವುದು ಎಂದು ಸಲಹೆ ನೀಡಿದರು.

ಈಗಾಗಲೇ ಸರ್ಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಮತ್ತು ಧಾರವಾಡದ ಗಾಮನಗಟ್ಟಿಯಲ್ಲಿ ಒಂದು ವಾಹನ ಚಾಲನಾ ತರಬೇತಿ ಸಂಸ್ಥೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಚಾಲನಾ ತರಬೇತಿ ಶಾಲೆಗಳನ್ನು ಪ್ರಾರಂಭಿಸಲು ಯೋಚಿಸಬಹುದು ಎಂದು ಸಭೆ ಅಭಿಪ್ರಾಯಪಟ್ಟಿತು.

ರಾಜ್ಯದ ಎಲ್ಲಾ ಐ.ಟಿ.ಐ. ತರಬೇತಿ ಸಂಸ್ಥೆಗಳಲ್ಲಿ ವಾಹನ ಚಾಲನಾ ತರಬೇತಿಗೆ ಸಂಬಂಧಪಟ್ಟ ಪಠ್ಯವನ್ನು ಅಳವಡಿಸಿ ತರಬೇತಿ ನೀಡುವ ಕುರಿತೂ ಸಲಹೆಗಳು ಬಂದವು.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳ ಅಕ್ಕಪಕ್ಕಗಳಲ್ಲಿ ಇರುವ ಮದ್ಯ ಮಾರಾಟ ಮಳಿಗೆ ತೆರವುಗೊಳಿಸುವ ಬಗ್ಗೆ ಸಭೆಯಲ್ಲಿ ಸಲಹೆ ಸ್ವೀಕರಿಸಲಾಯಿತು. ಈಗಾಗಲೇ ಹೆದ್ದಾರಿಗಳ ಪಕ್ಕದಲ್ಲಿ ಇರುವ ಮದ್ಯದ ಅಂಗಡಿಗಳಿಗೆ ನೀಡಲಾಗಿರುವ ಲೈಸೆನ್ಸ್‌ಗಳನ್ನು ಜೂನ್-೨೦೧೪ರ ಜೂನ್‌ನಲ್ಲಿ ನವೀಕರಣಕ್ಕೆ ಪರಿಗಣಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಮುಂಬೈ ಮಹಾನಗರದಲ್ಲಿ ಇರುವಂತೆ ಪ್ರತ್ಯೇಕ ಬಸ್ ನಿಲ್ದಾಣಗಳನ್ನು ಗುರುತಿಸುವುದು ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಬಸ್ಸಿನ ಹಿಂಬದಿ ಬಾಗಿಲಿನಿಂದ ಹತ್ತಿ ಮುಂಬದಿ ಬಾಗಿಲಿನಿಂದ ಇಳಿಯುವ ಕ್ರಮವನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.