ADVERTISEMENT

ಆಟೊ ವಿವಾದ: ಹೆಚ್ಚುವರಿ ಪರವಾನಗಿ ಶೀಘ್ರ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ಬೆಂಗಳೂರು: ನಗರದಲ್ಲಿ ಇರುವ ಕೆಲವು ಆಟೊ ಮಾಲೀಕರು ಒಂದಕ್ಕಿಂತ ಹೆಚ್ಚು ಪರವಾನಗಿ ಪಡೆದುಕೊಂಡಿರುವುದನ್ನು ಗಮನಿಸಿರುವ ಸರ್ಕಾರ, ಹೆಚ್ಚುವರಿ ಪರವಾನಗಿಯನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ.

ಆಟೊ ಪರವಾನಗಿ ನೀಡಿಕೆಯಲ್ಲಿ `ಗೋಲ್‌ಮಾಲ್~ ನಡೆದಿರುವ ಬಗ್ಗೆ ಕೋರ್ಟ್‌ಗೆ ದಾಖಲಾದ ಅರ್ಜಿಯೊಂದರಲ್ಲಿ ತಿಳಿದು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು.

ಜಯನಗರದ ಶಾಖೆಯಲ್ಲಿ ಒಬ್ಬರೇ ಆಟೊ ಮಾಲೀಕರಿಗೆ ಅನೇಕ ಚಾಲನಾ ಪರವಾನಗಿ ನೀಡಿರುವುದು ಹಾಗೂ ಒಂದೇ ಆಟೊಗೆ ಹಲವರಿಗೆ ಪರವಾನಗಿ ನೀಡಿರುವ ಬಗ್ಗೆ ವಿಚಾರಣೆ ವೇಳೆ ಕೋರ್ಟ್ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಕ್ರಮಕ್ಕೆ ನ್ಯಾಯಮೂರ್ತಿಗಳು ಗುರುವಾರ ಆದೇಶಿಸಿದ್ದರು.

ಕೋರ್ಟ್ ನಿರ್ದೇಶನದಂತೆ ಜಯನಗರ ಶಾಖೆಯಲ್ಲಿನ ದಾಖಲೆಗಳನ್ನು ಸರ್ಕಾರದ ಪರ ವಕೀಲರು ಕೋರ್ಟ್ ಮುಂದಿಟ್ಟರು. ಆದರೆ ಈ ಶಾಖೆಯಿಂದ ನಿಯೋಜನೆ ಮೇರೆಗೆ ವರ್ಗಾವಣೆಗೊಂಡ ಹಾಗೂ ನಿಯೋಜನೆ ಮೇರೆಗೆ ಶಾಖೆಗೆ ಬಂದ ಅಧಿಕಾರಿಗಳ ಅಂಕಿ ಅಂಶಗಳನ್ನು ಅವರು ನೀಡಲಿಲ್ಲ.

 ನಗರಕ್ಕೆ ಇನ್ನೂ 40 ಸಾವಿರ ಆಟೊರಿಕ್ಷಾಗಳಿಗೆ ಅನುಮತಿ ನೀಡಿ ಮಾರ್ಚ್ 23ರಂದು ಸರ್ಕಾರ ಹೊರಡಿಸಿರುವ ಆದೇಶದ ರದ್ದತಿಗೆ ಕೋರಿ `ಕರ್ನಾಟಕ ರಾಜ್ಯ ಆಟೊರಿಕ್ಷಾ ಚಾಲಕರ ಕ್ಷೇಮಾಭಿವೃದ್ಧಿ ಜಂಟಿ ಕ್ರಿಯಾ ಸಮಿತಿ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.

ಶುಕ್ರವಾರ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ರಸ್ತೆ ನಿರ್ವಹಣೆ, ಮೂಲಸೌಕರ್ಯ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಆಟೊಗಳ ಸಂಖ್ಯೆಯನ್ನು ಹೆಚ್ಚು ಮಾಡುವತ್ತ ಸರ್ಕಾರ ಗಮನ ಹರಿಸಬೇಕಿದೆ ಎಂದರು.
 
ಆದರೆ ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡ ಅಡ್ವೊಕೇಟ್ ಜನರಲ್ ಅಶೋಕ ಹಾರ‌್ನಹಳ್ಳಿ ಅವರು, ಆಟೊಗಳ ಸಂಖ್ಯೆಯನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದರು. ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪನ್ನು ಕಾಯ್ದಿರಿಸಿದರು.

ಇನ್ನೊಂದು ಅರ್ಜಿ: ಇನ್ನೊಂದು ಪ್ರಕರಣದಲ್ಲಿ, ಆಟೊ ಸಂಖ್ಯೆ ಹೆಚ್ಚಳ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ `ಆಟೊ ಸಂಖ್ಯೆ ಹೆಚ್ಚಳ ವಿಷಯ ಸರ್ಕಾರಕ್ಕೆ ಬಿಟ್ಟಿದ್ದು. ಇದನ್ನು ಪ್ರಶ್ನಿಸುವ ಬದಲು ರಸ್ತೆ ಅಭಿವೃದ್ಧಿ, ಮೂಲ ಸೌಕರ್ಯ ಇತ್ಯಾದಿ ಬೇಡಿಕೆಗಳನ್ನಿಟ್ಟು ಅರ್ಜಿ ಸಲ್ಲಿಸಬಹುದಲ್ಲವೇ~ ಎಂದರು. ಅಂತೆಯೇ, ಏಕಸದಸ್ಯಪೀಠದ ಮುಂದೆ ಇದೇ ವಿಚಾರವಾಗಿ ಅರ್ಜಿ ಇತ್ಯರ್ಥಕ್ಕೆ ಬಾಕಿ ಇರುವ ಕಾರಣ, ಅಲ್ಲಿಯೇ ವಿವಾದ ಬಗೆಹರಿಸಿಕೊಳ್ಳುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.