ಬೆಂಗಳೂರು: ವೈಯಾಲಿಕಾವಲ್ ಗೃಹನಿರ್ಮಾಣ ಸಹಕಾರ ಸಂಘವು ನಾಗವಾರ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದ 165 ಎಕರೆ ಜಮೀನನ್ನು ಮೂಲ ಮಾಲೀಕರಿಗೆ ಮರಳಿಸಬೇಕು ಎಂದು ಸರ್ಕಾರ 2013ರ ಜೂನ್ನಲ್ಲಿ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
‘ಈ ಬಡಾವಣೆ ನಿರ್ಮಾಣಕ್ಕೆ ಗುರುತಿಸಲಾದ 165 ಎಕರೆ ಜಮೀನಿನ ಪೈಕಿ ಒಟ್ಟು 52.30 ಎಕರೆ ಜಮೀನನ್ನು ಮಾತ್ರ ಮೂಲ ಮಾಲೀಕರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಆದೇಶ ಪಾಲಿಸಿರುವ ಕುರಿತು ಸುಪ್ರೀಂ ಕೋರ್ಟ್‌ಗೆ ಹೇಳಿಕೆಯನ್ನೂ ಸಲ್ಲಿಸಲಾಗಿದೆ. ಅಲ್ಲಿ ಇದರ ವಿಚಾರಣೆ ಬಾಕಿ ಇದೆ. ಈ ಸಂದರ್ಭದಲ್ಲಿ ಸಂಪೂರ್ಣ ಜಮೀನು ಮರಳಿಸುವಂತೆ ಹೇಳುವುದು ಸರಿಯಲ್ಲ’ ಎಂದು ಸಂಘ ವಾದಿಸಿತ್ತು.
ವಿಚಾರ ಸುಪ್ರೀಂ ಕೋರ್ಟ್ ಮುಂದಿರುವಾಗ, ಸರ್ಕಾರ ಹೀಗೆ ಆದೇಶ ಹೊರಡಿಸಿದ್ದು ತರಾತುರಿಯ ಕ್ರಮ. ಇದು ಸರಿಯಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಆನಂಧ ಬೈರಾರೆಡ್ಡಿ ಅವರ ಪೀಠ, ಅರ್ಜಿ ಮಾನ್ಯ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.