ADVERTISEMENT

ಆಧಾರ್: ಪ್ರತಿದಿನ 10 ಲಕ್ಷ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 20:18 IST
Last Updated 6 ಫೆಬ್ರುವರಿ 2013, 20:18 IST
ನಗರದಲ್ಲಿ ಮಂಗಳವಾರ ನಡೆದ 15ನೇ ಅಖಿಲ ಭಾರತ ಬೆರಳಚ್ಚು ಸಂಗ್ರಹಾಲಯಗಳ ನಿರ್ದೇಶಕರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಅವರು ಆಧಾರ್ ಯೋಜನೆಯ ಉಪ ಮಹಾನಿರ್ದೇಶಕ ಅಶೋಕ್ ಎಂ.ಆರ್.ದಳವಾಯಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಐಜಿಪಿ ಬಿ.ರಾಧಿಕಾ ಚಿತ್ರದಲ್ಲಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ 15ನೇ ಅಖಿಲ ಭಾರತ ಬೆರಳಚ್ಚು ಸಂಗ್ರಹಾಲಯಗಳ ನಿರ್ದೇಶಕರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಅವರು ಆಧಾರ್ ಯೋಜನೆಯ ಉಪ ಮಹಾನಿರ್ದೇಶಕ ಅಶೋಕ್ ಎಂ.ಆರ್.ದಳವಾಯಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ ಐಜಿಪಿ ಬಿ.ರಾಧಿಕಾ ಚಿತ್ರದಲ್ಲಿದ್ದಾರೆ.   

ಬೆಂಗಳೂರು: `ಆಧಾರ್ ಯೋಜನೆಗಾಗಿ ದೇಶದಾದ್ಯಂತ ಪ್ರತಿದಿನ ಹತ್ತು ಲಕ್ಷ ಜನರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಎಲ್ಲ ಮಾಹಿತಿಗಳನ್ನೂ ಸಂಪೂರ್ಣವಾಗಿ ಗೌಪ್ಯವಾಗಿಡಲಾಗುತ್ತಿದೆ' ಎಂದು ಆಧಾರ್ ಯೋಜನೆಯ ಉಪ ಮಹಾನಿರ್ದೇಶಕ ಅಶೋಕ್ ಎಂ.ಆರ್.ದಳವಾಯಿ ಹೇಳಿದರು.

ನಗರದ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ 15ನೇ ಅಖಿಲ ಭಾರತ ಬೆರಳಚ್ಚು ಸಂಗ್ರಹಾಲಯಗಳ ನಿರ್ದೇಶಕರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ದೇಶದಲ್ಲಿ 121 ಕೋಟಿ ಜನರಿದ್ದು, ಈ ವರೆಗೆ 32.2 ಕೋಟಿ ಜನರು ಆಧಾರ್ ಯೋಜನೆಯಡಿ ನೋಂದಣಿಯಾಗಿದ್ದಾರೆ. ಕಾನೂನು ಬಾಹಿರವಾಗಿ ನೋಂದಣಿಯಾಗಿದ್ದ ಎರಡು ಕೋಟಿ ಆಧಾರ್ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಯುಐಡಿಎಐ (ಆಧಾರ್ ಪ್ರಾಧಿಕಾರ) ಮಸೂದೆಯ ಸೆಕ್ಷನ್ 30(3)ರಲ್ಲಿ ಯೋಜನೆಗಾಗಿ ಸಂಗ್ರಹಿಸಲಾದ ಮಾಹಿತಿಯನ್ನು ಬಹಿರಂಗ ಪಡಿಸುವಂತಿಲ್ಲ. ಈ ಮಸೂದೆಗೆ ಇನ್ನೂ ಸಂಸತ್ತಿನಲ್ಲಿ ಅಂಗೀಕಾರ ದೊರೆತಿಲ್ಲ' ಎಂದು ಅವರು ತಿಳಿಸಿದರು.

`ಪ್ರತಿಯೊಬ್ಬರ ಬೆರಳಚ್ಚು ಹಾಗೂ ಕಣ್ಣಿನ ಗುರುತು ಭಿನ್ನವಾಗಿಯೇ ಇರುತ್ತದೆ. ಹೀಗಾಗಿ ಆಧಾರ್ ಯೋಜನೆಗೆ ಬೇನಾಮಿ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಆಧಾರ್ ಯೋಜನೆಯ ನೋಂದಣಿ ಕಾರ್ಯ ವೇಗವಾಗಿ ನಡೆಯುತ್ತಿದೆ' ಎಂದರು.

ಖೈದಿಗಳ ಗುರುತು ಪತ್ತೆ ಕಾಯ್ದೆ 1920ಕ್ಕೆ ತಿದ್ದುಪಡಿ ತರಬೇಕು, ಎಲ್ಲ ಪೊಲೀಸ್ ಠಾಣೆಗಳಿಗೆ ಬೆರಳಚ್ಚು ಮಾದರಿ ಪಡೆಯುವ ಉಪಕರಣಗಳನ್ನು ಒದಗಿಸಬೇಕು, ಅಪರಾಧ ಪ್ರಕರಣಗಳ ಬೆರಳಚ್ಚು ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ (ಎನ್‌ಸಿಆರ್‌ಬಿ) ವೆಬ್‌ಸೈಟ್‌ನಲ್ಲಿ ದಾಖಲಿಸಬೇಕೆಂಬ ನಿರ್ಣಯಗಳು ಸೇರಿದಂತೆ ಸಮಾವೇಶದಲ್ಲಿ ಹತ್ತು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ, ಎನ್‌ಸಿಆರ್‌ಬಿ ಉಸ್ತುವಾರಿ ನಿರ್ದೇಶಕ ಅನಿಲ್ ಚಾವ್ಲಾ, ರಾಜ್ಯ ಬೆರಳಚ್ಚು ಸಂಗ್ರ ಹಾಲಯದ ಅಧೀಕ್ಷಕ ಕೆ.ಆರ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.