ADVERTISEMENT

ಆನೇಕಲ್: ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 20:21 IST
Last Updated 24 ಏಪ್ರಿಲ್ 2013, 20:21 IST

ಬೆಂಗಳೂರು: ಆನೇಕಲ್‌ನ ಮುತ್ತಗಟ್ಟೆ ದಿಣ್ಣೆ ಸಮೀಪದ ಮಾವಿನ ತೋಪಿನಲ್ಲಿ ಬುಧವಾರ ಬೆಳಿಗ್ಗೆ 23 ವರ್ಷದ ಯುವತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಾವರೆಕೆರೆಯ ಸಿಂಡಿಕೇಟ್ ಕಾಲೊನಿಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಮಾ (23) ಎಂಬುವರು ಇತ್ತೀಚೆಗಷ್ಟೆ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದರ ಬೆನ್ನಲ್ಲೇ ಆನೆಕಲ್‌ನಲ್ಲಿ ಇಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

`ಮಾವಿನ ತೋಪಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವತಿಯನ್ನು ಕಂಡ ಸ್ಥಳೀಯರು, ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಯುವತಿಯನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ವೈದ್ಯರ ಶಿಫಾರಸಿನಂತೆ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಯುವತಿಯ ಕುತ್ತಿಗೆ, ಮೊಣಕೈ ಮತ್ತು ಎದೆ ಭಾಗದಲ್ಲಿ ಗಾಯದ ಗುರುತುಗಳಿವೆ' ಎಂದು ಪೊಲೀಸರು ಮಾಹಿತಿ ನೀಡಿದರು.

ಘಟನಾ ಸ್ಥಳದಲ್ಲಿ ಎರಡು ಬ್ಯಾಗ್‌ಗಳು ದೊರೆತಿವೆ. ಒಂದು ಬ್ಯಾಗ್‌ನಲ್ಲಿ ಯುವತಿಯ ಬಟ್ಟೆಗಳು ಪತ್ತೆಯಾಗಿದ್ದರೆ, ಮತ್ತೊಂದು ಬ್ಯಾಗ್‌ನಲ್ಲಿ ಹೊಗೆ ಸೊಪ್ಪಿನ ಪೊಟ್ಟಣ ಹಾಗೂ ನೈಸ್ ರಸ್ತೆಯಲ್ಲಿ ಏ.22ರಂದು ಟೋಲ್ ಹಣ ಸಂದಾಯ ಮಾಡಿರುವ ರಶೀದಿ ಪತ್ತೆಯಾಗಿದೆ. ಈ ಅಂಶಗಳನ್ನು ಗಮನಿಸಿದರೆ, ಯುವತಿ ಪ್ರೀತಿಯಲ್ಲಿ ಮೋಸ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಿಯಕರನೇ ಆಕೆಯನ್ನು ಇಲ್ಲಿಗೆ ಕರೆತಂದು ಕೊಲೆ ಮಾಡಲೆತ್ನಿಸಿರುವ ಸಾಧ್ಯತೆ ಇದೆ ಎಂದು ಆನೇಕಲ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

`ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, 24 ಗಂಟೆ ಕಾಲ ಏನೂ ಹೇಳಲಾಗುವುದಿಲ್ಲ. ಆಕೆಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ' ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ.ಗುರುಶಂಕರ್ ತಿಳಿಸಿದರು.

ಅತ್ಯಾಚಾರದ ಸಾಧ್ಯತೆ ಕಡಿಮೆ
ಯುವತಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ. ಆಕೆಯ ರಕ್ತಮಾದರಿ ಹಾಗೂ ವಸ್ತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ತಜ್ಞರು ವರದಿ ನೀಡಿದ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. ಯುವತಿಯ ವಿಳಾಸವನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
- ಡಿ.ಪ್ರಕಾಶ್, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ


ಈಕೆ ಲತಾ?
`ಅಪರಿಚಿತ ವ್ಯಕ್ತಿಯೊಬ್ಬ ವಿಕ್ಟೋರಿಯಾ ಆಸ್ಪತ್ರೆಗೆ ಬಂದು `ತನ್ನ ಹೆಸರು ಪ್ರಭಾಕರ್. ಪ್ರಜ್ಞಾಹೀನಾ ಸ್ಥಿತಿಯಲ್ಲಿ ಸಿಕ್ಕಿರುವ ಯುವತಿ ನನ್ನ ತಂಗಿ ಲತಾ. ನಾಲ್ಕು ದಿನಗಳಿಂದ ಆಕೆ ಕಾಣೆಯಾಗಿದ್ದಳು' ಎಂದು ಆಸ್ಪತ್ರೆಯ ನೋಂದಣಿ ಪುಸ್ತಕದಲ್ಲಿ ಬರೆಸಿ ನಾಪತ್ತೆಯಾಗಿದ್ದಾನೆ. ಸದ್ಯ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ' ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT