ADVERTISEMENT

ಆಭರಣ ಅಡವಿಟ್ಟು ಸುಪಾರಿಗೆ ಹಣ

ಲಿಂಗರಾಜು ಹತ್ಯೆ: ಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಬೆಂಗಳೂರು: ಬಿಬಿಎಂಪಿ ಸದಸ್ಯೆ ಗೌರಮ್ಮ ಅವರು, ತಮ್ಮ ಚಿನ್ನದ ಒಡವೆಗಳನ್ನು ಅಡವಿಟ್ಟು ಹಣ ತಂದಿದ್ದರು. ಅದನ್ನೇ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆಗಾಗಿ ಸುಪಾರಿ ಹಂತಕರಿಗೆ ನೀಡಲಾಗಿದೆ ಎಂದು ಪ್ರಕರಣದ ಅಮಿಕಸ್ ಕ್ಯೂರಿ (ನ್ಯಾಯಾಲಯದ ಸಹಾಯಕ) ಆಗಿರುವ ವಕೀಲ ಅಸ್ಮತ್ ಪಾಷಾ ಅವರು ಸೋಮವಾರ ಹೈಕೋರ್ಟ್‌ಗೆ ತಿಳಿಸಿದರು.

ಈ ಹತ್ಯೆ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಪಾಷಾ ಅವರು ಈ ಮಾಹಿತಿ ನೀಡಿದರು.

`ಹತ್ಯೆ ಹಿಂದಿನ ದಿನ ಗೌರಮ್ಮ ಒಡವೆಗಳನ್ನು ಅಡವಿಟ್ಟಿದ್ದಾರೆ. ಆದರೆ, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು' ಎಂದು ಅವರು ವಾದಿಸಿದರು.ಪ್ರಕರಣವನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವ ಸಂಬಂಧ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ಬಿಬಿಎಂಪಿ, ಬಿಡಿಎ ತರಾಟೆಗೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಸೋಮವಾರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, `ನೀವಿಬ್ಬರೂ ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗುವ ಮೂಲಕ, ಪ್ರತಿಷ್ಠೆ ಹಾಳು ಮಾಡಿಕೊಳ್ಳುತ್ತಿದ್ದೀರಿ' ಎಂದು ಹೇಳಿದೆ.

ನಗರದ ಎಂಎಲ್‌ಎ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ನಿಯಮ ಬಾಹಿರವಾಗಿ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕಿ ಶಕುಂತಲಾ ಚೌಗಲೆ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

`2005-06ಕ್ಕೂ ಮುನ್ನ ಬಿಬಿಎಂಪಿ ಮತ್ತು ಬಿಡಿಎ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಆಗ ಯಾವುದೇ ಕಾರ್ಯಕ್ಕೂ ಬಿಡಿಎ ನಮ್ಮಿಂದ ಅನುಮತಿ ಪಡೆಯುತ್ತಿರಲಿಲ್ಲ.     ಅವರು ಮಾಡಿರುವ ತಪ್ಪಿನಿಂದ      ನಮ್ಮ ಮೇಲೆ ಆರೋಪ ಬರುತ್ತಿದೆ' ಎಂದು ಬಿಬಿಎಂಪಿ ಪರ ವಕೀಲರು ವಾದಿಸಿದರು.

ಇದಕ್ಕೆ ಪ್ರತ್ಯುತ್ತರ ಎಂಬಂತೆ, `ನಿಮ್ಮ ಹೆಸರು ನಾವು ಕೆಡಿಸುತ್ತಿಲ್ಲ. ನೀವೇ ನಮ್ಮ ಹೆಸರು ಹಾಳು ಮಾಡುತ್ತಿದ್ದೀರಿ' ಎಂದು ಬಿಡಿಎ ಪರ ವಕೀಲರು ತಿರುಗೇಟು ನೀಡಿದರು.ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೇನ್, `ನಿಮ್ಮ ಹೆಸರನ್ನು ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ.

ಸ್ಥಳಕ್ಕೆ ಭೇಟಿಯನ್ನೇ ನೀಡದ ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್, ನಕ್ಷೆಗೆ ಅನುಮೋದನೆ ನೀಡಿದ್ದಾರೆ. ರಸ್ತೆಯ ಮಧ್ಯದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಅವಕಾಶ ನೀಡಿದ್ದು    ಹೇಗೆ? ಇಂಥ ಅಧಿಕಾರಿಗಳು ನಮಗೆ ಬೇಕಾ?' ಎಂದು ಮೌಖಿಕವಾಗಿ ಪ್ರಶ್ನಿಸಿದರು.ಅಕ್ರಮ ಅಪಾರ್ಟ್‌ಮೆಂಟ್    ಕುರಿತು ಬಿಬಿಎಂಪಿ ಹಾಗೂ ಬಿಡಿಎ   ಜಂಟಿ ಪ್ರಮಾಣಪತ್ರ ಸಲ್ಲಿಸುವಂತೆ  ಸೂಚಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT