ADVERTISEMENT

ಆಭರಣ ಖರೀದಿಯ ಸೋಗಿನಲ್ಲಿ ಕಳವಿಗೆ ಯತ್ನ: ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:18 IST
Last Updated 19 ಸೆಪ್ಟೆಂಬರ್ 2013, 20:18 IST

ಬೆಂಗಳೂರು: ಹಳೆಯ ಚಿನ್ನದ ಒಡವೆ ವಿನಿಮಯ ಮಾಡಿಕೊಂಡು ಹೊಸ ಚಿನ್ನಾಭರಣ ಖರೀದಿಸುವ ಸೋಗಿನಲ್ಲಿ ಬಂದು ಕಳ್ಳತನಕ್ಕೆ ಯತ್ನಿಸಿದ್ದ ಯುವಕನನ್ನು ಮಳಿಗೆಯ ಸಿಬ್ಬಂದಿ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಮಲ್ಲೇಶ್ವರದ ಸಂಪಿಗೆ ರಸ್ತೆಯ ಚಿನ್ನಾಭರಣ ಮಳಿಗೆಯಲ್ಲಿ ಗುರುವಾರ ನಡೆದಿದೆ.

ರಾಜಾಜಿನಗರ ನಿವಾಸಿ ಕಾರ್ತಿಕ್‌ (28) ಬಂಧಿತ ಯುವಕ. ಮಳಿಗೆಗೆ ಬಂದಿದ್ದ ಕಾರ್ತಿಕ್‌, ನಕಲಿ ಸರಗಳನ್ನು  ಮಳಿಗೆಯ ಸಿಬ್ಬಂದಿಗೆ ನೀಡಿ, ಹೊಸ ಚಿನ್ನದ ಸರಗಳನ್ನು ಖರೀಸಬೇಕೆಂದು ಹೇಳಿದ್ದಾನೆ. ಸಿಬ್ಬಂದಿ ಚಿನ್ನದ ಸರಗಳನ್ನು ತೋರಿಸುವಾಗ ಅವರ ಗಮನ ಬೇರೆಡೆ ಸೆಳೆದು 30 ಗ್ರಾಂ ಚಿನ್ನದ ಸರವನ್ನು ಷೂ ಒಳಕ್ಕೆ ಹಾಕಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ತಿಕ್‌ ವರ್ತನೆಯಿಂದ ಅನುಮಾನಗೊಂಡ ಮಳಿಗೆಯ ಸಿಬ್ಬಂದಿ ಆತನನ್ನು ಹಿಡಿದು ತಪಾಸಣೆಗೊಳಪಡಿಸಿದಾಗ ಚಿನ್ನದ ಸರ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳತನ ಕೃತ್ಯಗಳ ಸಂಬಂಧ ಸುದ್ದಿ  ವಾಹಿನಿಗಳಲ್ಲಿ ಪ್ರಸಾರಗೊಂಡ ಕಾರ್ಯಕ್ರಮಗಳನ್ನು ವೀಕ್ಷಿಸಿ ತಾನು ಕಳ್ಳತನಕ್ಕೆ ಸಂಚು ರೂಪಿಸಿದ್ದೆ ಎಂದು ಕಾರ್ತಿಕ್‌ ಹೇಳಿಕೆ ನೀಡಿದ್ದಾನೆ.

ಆತ ಒಂದು ತಿಂಗಳ ಹಿಂದೆ ಚಿಕ್ಕಪೇಟೆಯ ಚಿನ್ನಾಭರಣ ಮಳಿಗೆಯಲ್ಲೂ ಇದೇ ರೀತಿ ಕಳ್ಳತನ ಕ್ಕೆ ಯತ್ನಿಸಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ತನ್ನ ಚಿಕ್ಕಮ್ಮನ ಮಗನ ವೈದ್ಯಕೀಯ ವೆಚ್ಚಕ್ಕಾಗಿ ತಾನು ಕಳ್ಳತನಕ್ಕಿಳಿದಿದ್ದೆ ಎಂದು ಕಾರ್ತಿಕ್‌ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.