ADVERTISEMENT

ಆಯುಕ್ತರ ಹುದ್ದೆಗೆ ಮತ್ತೆ ಕಸದ `ಬಿಸಿ'

ರಜನೀಶ್ ಗೋಯಲ್‌ಗೆ ಕಡ್ಡಾಯ ರಜೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:33 IST
Last Updated 17 ಡಿಸೆಂಬರ್ 2012, 19:33 IST

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರ ಹುದ್ದೆಗೆ ಕಸದ ಸಮಸ್ಯೆ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ. ಕಸದ ಸಮಸ್ಯೆ ದೈತ್ಯವಾಗಿ ಬೆಳೆದು ನಿಂತ ಪರಿಣಾಮ ಎಂ.ಕೆ. ಶಂಕರಲಿಂಗೇಗೌಡ ಅವರನ್ನು ಆಯುಕ್ತರ ಹುದ್ದೆಯಿಂದ ವರ್ಗಮಾಡಿದ್ದ ಸರ್ಕಾರ, ಅಂತಹದ್ದೇ `ದಂಡ'ವನ್ನು ಈಗ ಡಾ. ರಜನೀಶ್ ಗೋಯಲ್ ಅವರ ಮೇಲೂ ಬೀಸಿದೆ.

ನಗರದಲ್ಲಿ ತ್ಯಾಜ್ಯದ ವಿಲೇವಾರಿ ಸೂಕ್ತವಾಗಿ ನಡೆಯದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಎರಡಕ್ಕೂ ಛೀಮಾರಿ ಹಾಕಿತ್ತು. ಇದರಿಂದ ಸರ್ಕಾರ ಮುಜುಗರ ಅನುಭವಿಸಬೇಕಾಗಿತ್ತು. ಗೋಯಲ್  ಅವರನ್ನು ವರ್ಗಾ ವಣೆ ಮಾಡಲಾ ಗುತ್ತದೆ ಎಂಬ  ಗುಸುಗುಸು  ಮಾತು ಕಳೆದ  ಕೆಲವು ವಾರಗ ಳಿಂದ ಕೇಳಿ  ಬಂದಿತ್ತು. ಒತ್ತಡ ತಾಳಲಾಗದೆ ಗೋಯಲ್ ಅವರೇ ವರ್ಗಾವಣೆ ಕೇಳಿದ್ದಾರೆ ಎಂಬ ಗಾಳಿಮಾತೂ ಬಿಬಿಎಂಪಿ ಆವರಣದಲ್ಲಿ ತೇಲಾಡಿತ್ತು.

`ಗೋಯಲ್ ಅವರನ್ನು ಕಡ್ಡಾಯದ ರಜೆ ಮೇಲೆ ಕಳುಹಿಸಲು ಎಲ್ಲ ಅಂಶಗಳು ಕಾರಣವಾಗಿವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮುಗಿದ ಮೇಲೆ ವರ್ಗಾವಣೆ ಆದೇಶ ಹೊರಬೀಳುತ್ತದೆ. ಸಿದ್ದಯ್ಯ ನಿವೃತ್ತಿ ಹೊಂದುವವರೆಗೆ ಇದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ' ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ ನಿಯೋಜನೆಗೊಂಡ ತಕ್ಷಣ ಅಧಿಕಾರ ಸ್ವೀಕರಿಸಿರುವ ಹಿರಿಯ ಐಎಎಸ್ ಅಧಿಕಾರಿ ಸಿದ್ದಯ್ಯ, ಅಧಿಕಾರಿಗಳ ಸಭೆಯನ್ನೂ ನಡೆಸಿದರು. `ಬಿಬಿಎಂಪಿ ಸಮಸ್ಯೆಗಳು ಏನೆಂಬುದು ಚೆನ್ನಾಗಿ ಗೊತ್ತಿದೆ. ಆಯುಕ್ತನಾಗಿ ಕಾರ್ಯ ನಿರ್ವಹಿಸುವವರೆಗೆ ಇಲ್ಲಿಯ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತೇನೆ' ಎಂದು ಸಿದ್ದಯ್ಯ ಪ್ರತಿಕ್ರಿಯಿಸಿದರು.

ಸಿದ್ದಯ್ಯ ಈ ಹಿಂದೆ 2010ರ ಜುಲೈ 1ರಿಂದ 2011ರ ನವೆಂಬರ್ 28ರವರೆಗೆ ಬಿಬಿಎಂಪಿ ಆಯುಕ್ತರಾಗಿ ಕಾರ್ಯ ನಿರ್ವಹಿಸ್ದ್ದಿದರು.
ಆಯುಕ್ತ ಗೋಯಲ್ ಅವರನ್ನು ಕಡ್ಡಾಯದ ರಜೆ ಮೇಲೆ ಕಳುಹಿಸಿದ ಸರ್ಕಾರದ ಕ್ರಮದ ವಿಷಯವಾಗಿ ಪ್ರತಿಕ್ರಿಯೆ ನೀಡಲು ಮೇಯರ್ ಡಿ.ವೆಂಕಟೇಶಮೂರ್ತಿ ನಿರಾಕರಿಸಿದರು.

`ಗೋಯಲ್ ಅನಾರೋಗ್ಯ ಕಾರಣದಿಂದ ರಜೆ ಪಡೆದಿರಬಹುದು' ಎಂದ ಅವರು, `ಸಿದ್ದಯ್ಯ ಅವರು ಬಿಬಿಎಂಪಿ ಸಮಸ್ಯೆಗಳನ್ನು ಪರಿಹರಿಸುವ ವಿಶ್ವಾಸ ಇದೆ' ಎಂದು ಹೇಳಿದರು. ದಿಢೀರ್ ರಜೆ ಕುರಿತು ಪ್ರತಿಕ್ರಿಯೆ ಕೇಳಲು ಯತ್ನಿಸಿದರೂ ಗೋಯಲ್ ಲಭ್ಯರಾಗಲಿಲ್ಲ.
ಉಪ ಮುಖ್ಯಮಂತ್ರಿ ಆರ್. ಅಶೋಕ, ನಗರಾಭಿವೃದ್ಧಿ ಸಚಿವ ಎಸ್. ಸುರೇಶಕುಮಾರ್ ಮತ್ತು ಮೇಯರ್ ಡಿ. ವೆಂಕಟೇಶಮೂರ್ತಿ ಒಟ್ಟಾಗಿ ಸಿದ್ದಯ್ಯ ಅವರನ್ನು ಮತ್ತೆ ಆಯುಕ್ತರ ಹುದ್ದೆಗೆ ಬರಲು ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.