ADVERTISEMENT

ಆಯುರ್ವೇದ ಆಸ್ಪತ್ರೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:00 IST
Last Updated 19 ಏಪ್ರಿಲ್ 2012, 19:00 IST

ಹೊಸಕೋಟೆ: ತಾಲ್ಲೂಕಿನ ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಆಯುರ್ವೇದ ಆಸ್ಪತ್ರೆ ಆರಂಭಿಸುವಂತೆ ಎಪಿಎಂಸಿ ಅಧ್ಯಕ್ಷ ಸಿ.ಮುನಿಯಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ಹಮ್ಮಿಕೊಂಡಿರುವ ಏಳು ದಿನಗಳ ವಿಶೇಷ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದರ ಮೂಲಕ ಬಡಜನರಿಗೆ ನೆರವಾಗುವಂತೆ ಅವರು ಮನವಿ ಮಾಡಿದರು.

ಉಚಿತ ಆರೋಗ್ಯ ತಪಾಸಣೆ: ಶಿಬಿರಾಧಿಕಾರಿ ಡಾ.ರಾಜು ಮಾತನಾಡಿ, ಆರೋಗ್ಯ, ಆಯುರ್ವೇದದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಶಿಬಿರದ ಮುಖ್ಯ ಉದ್ದೇಶವಾಗಿದೆ. ಏ.23ರವರೆಗೆ ಶಿಬಿರದಲ್ಲಿ ಪ್ರತಿ ದಿನ ಬೆಳಿಗ್ಗೆ 10 ರಿಂದ ಮದ್ಯಾಹ್ನ 1ರವರೆಗೆ ಉಚಿತ ಅರೋಗ್ಯ ಸೇವೆಯನ್ನು ಪಟ್ಟಣದ ಕೆಜಿಕೆಎಂಎಸ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.

ಡಾ.ಶೈಲಜಾ ಕುಮಾರಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಕೆ.ರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಯ್ಯ, ಟೌನ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಇಮ್ತಿಯಾಜ್‌ಪಾಷ, ಡಾ.ಶೈಲಾ ಯೋಗಾನಂದ್ ಉಪಸ್ಥಿತರಿದ್ದರು. ಮುಖಂಡ ಆರ್.ಮುನಿನಂಜಪ್ಪ ಸ್ವಾಗತಿಸಿದರು, ಡಾ.ಸುಮಿತ್ರಾಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.