ADVERTISEMENT

ಆರೋಗ್ಯ-ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯ

ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿಷಾದ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 20:06 IST
Last Updated 6 ಸೆಪ್ಟೆಂಬರ್ 2013, 20:06 IST

ಬೆಂಗಳೂರು: `ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಿಗಬೇಕಾದ ಸೂಕ್ತ ಆದ್ಯತೆ ಇನ್ನೂ ಸಿಕ್ಕಿಲ್ಲ' ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿಷಾದ ವ್ಯಕ್ತಪಡಿಸಿದರು.

ಭಾರತೀಯ ವಿದ್ಯಾ ಭವನ ಮತ್ತು ದಿ ಬೆಂಗಳೂರು ಪ್ರೆಸ್ ಜತೆಯಾಗಿ ನಡೆಸುತ್ತಿರುವ ಭವನ್-ಬೆಂಗಳೂರು ಪ್ರೆಸ್ ಸ್ಕೂಲ್‌ನ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ದೇಶದ ಕಡು ಬಡವರಿಗೂ ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಸಿಕ್ಕಾಗಲೇ ಅಭಿವೃದ್ಧಿ ಸಾಧ್ಯ' ಎಂದು ಪ್ರತಿಪಾದಿಸಿದರು.

`ಸಾಂಸ್ಕೃತಿಕ ಇತಿಹಾಸ ಮತ್ತು ಆಧುನಿಕ ಜ್ಞಾನ ಎರಡನ್ನೂ ಹದವಾಗಿ ಮಿಶ್ರಣ ಮಾಡುವ ಮೂಲಕ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಿದ ಹೆಮ್ಮೆ ಭಾರತೀಯ ವಿದ್ಯಾಭವನದ ಸ್ಥಾಪಕ ಡಾ.ಕೆ.ಎಂ. ಮುನ್ಶಿ ಅವರದಾಗಿದೆ' ಎಂದು ಮೆಚ್ಚುಗೆಯಿಂದ ಹೇಳಿದರು. `ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮಕ್ಕಳು ಸಾವನ್ನಪ್ಪಿದ ಘಟನೆ ನನ್ನನ್ನು ಈಗಲೂ ಕಾಡುತ್ತಿದೆ. ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳುವ ಅಗತ್ಯವಿದೆ' ಎಂದು ತಿಳಿಸಿದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ, ನಿರ್ದೇಶಕ ಎಚ್.ಎನ್. ಸುರೇಶ್, ಕಾರ್ಯದರ್ಶಿ ಕೆ.ಜಿ. ರಾಘವನ್ ಹಾಜರಿದ್ದರು.
ಭವನ್-ಬೆಂಗಳೂರು ಪ್ರೆಸ್ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿವರೆಗೆ ಸುಮಾರು 700 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 70,000 ಚದರ ಅಡಿ ವಿಸ್ತೀರ್ಣದ ಆರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, 28 ತರಗತಿ ಕೋಣೆಗಳಿವೆ. ವಿಶಾಲವಾದ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಎಲ್ಲವನ್ನೂ ಶಾಲಾ ಕಟ್ಟಡ ಒಳಗೊಂಡಿದೆ. ಬೆಂಗಳೂರು ಪ್ರೆಸ್ ಸಂಸ್ಥೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂದಾನ ಮಾಡಿದೆ. ಡಿ. ವೀರೇಂದ್ರ ಹೆಗ್ಗಡೆ, ದಯಾನಂದ ಪೈ, ಮಾನಂದಿ ನಂಜುಂಡ ಶೆಟ್ಟಿ, ಟಿ.ವಿ. ಮೋಹನದಾಸ್ ಪೈ ಸೇರಿದಂತೆ ಹಲವರು ದೇಣಿಗೆ ನೀಡಿದ್ದಾರೆ. ಶಾಲೆಯಲ್ಲಿ ಅರ್ಧದಷ್ಟು ಪ್ರಮಾಣದಲ್ಲಿ ಕಡು ಬಡವ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.