ADVERTISEMENT

ಆರೋಪಿ ಜಾಮೀನಿಗೆ ಮದುವೆ ಷರತ್ತು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST

ಬೆಂಗಳೂರು: `ಜಾಮೀನು ಬೇಕೆ, ಹಾಗಿದ್ದರೆ ನಿನ್ನ ಮೋಸಕ್ಕೆ ಬಲಿಯಾಗಿ ತಾಯಿಯಾಗಿರುವ ಆ ಯುವತಿಯನ್ನು ವಿವಾಹವಾಗು. ಇಲ್ಲದಿದ್ದರೆ ನಿನಗೆ ಜೈಲೇ ಗತಿ~ ಎಂದು ಯುವಕನೊಬ್ಬನಿಗೆ ಹೇಳುವ ಮೂಲಕ ಆತನಿಗೆ `ಪಾಠ~ ಕಲಿಸಿದ ಪ್ರಕರಣವೊಂದು ಹೈಕೋರ್ಟ್‌ನಲ್ಲಿ ಮಂಗಳವಾರ ನಡೆಯಿತು.

ಎರಡು ತಿಂಗಳ ಮಗುವಿನ ತಾಯಿಯಾಗಿರುವ ಯುವತಿಯನ್ನು 20 ದಿನಗಳ ಒಳಗೆ ವಿವಾಹವಾಗುವಂತೆ ನಗರದ ಅರಕೆರೆ ನಿವಾಸಿ, 23 ವರ್ಷ ವಯಸ್ಸಿನ ಜಿ. ಮೂರ್ತಿ ಅವರಿಗೆ ನ್ಯಾಯಮೂರ್ತಿ ವಿ.ಜಗನ್ನಾಥನ್   ನಿರ್ದೇಶಿಸಿದ್ದಾರೆ. ವಿವಾಹವಾಗದೇ ಹೋದರೆ 21ನೇ ದಿನ ಕಂಬಿಯ ಹಿಂದೆ ಇರಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಪ್ರಕರಣದ ವಿವರ: ಆಟೊ ಚಾಲಕನಾಗಿರುವ ಮೂರ್ತಿ, ಐದು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕೆ ಇದ್ದ ಯುವತಿ ದಿನವೂ ಈತನ ಆಟೊದಲ್ಲಿಯೇ ಮನೆಗೆ ಬರುತ್ತಿದ್ದಳು. ಐದು ವರ್ಷಗಳ ಈ ಪ್ರಯಾಣ, ಪ್ರಣಯಕ್ಕೆ ತಿರುಗಿತು.

ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಮಯದಲ್ಲಿ ಮೂರ್ತಿ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ ಎನ್ನುವುದು ಯುವತಿಯ ಆರೋಪ. ಇದೇ ಆರೋಪ ಹೊರಿಸಿ ನಗರದ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಆಕೆ ಏಪ್ರಿಲ್‌ನಲ್ಲಿ ದೂರು ದಾಖಲು ಮಾಡಿದಳು. `ವಿವಾಹವಾಗುವಂತೆ ಆತನನ್ನು ಕೋರಿಕೊಂಡೆ. ಮದುವೆ ಮಾಡಿಕೊಡುವಂತೆ ಆತನ ಮನೆಯವರಿಗೂ ದುಂಬಾಲು ಬಿದ್ದೆ. ಅದಕ್ಕೆ ಅವರು ಒಪ್ಪಲಿಲ್ಲ. ಇನ್ನೊಮ್ಮೆ ವಿವಾಹದ ವಿಷಯ ಎತ್ತಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಆತನ ಮನೆಯವರು ಬೆದರಿಕೆ ಹಾಕಿದರು. ಅತ್ಯಾಚಾರದ ಫಲವಾಗಿ ಗರ್ಭ ಧರಿಸಿದರೂ ವಿವಾಹಕ್ಕೆ ಮೂರ್ತಿ ಮನಸ್ಸು ಮಾಡಿಲ್ಲ.

ಗರ್ಭ ಧರಿಸಿ ಎಂಟು ತಿಂಗಳು ಕಳೆದರೂ ಒಂದಲ್ಲೊಂದು ಕಾರಣ ನೀಡಿ ವಿವಾಹವನ್ನು ಆತ ಮುಂದೂಡುತ್ತಲೇ ಇದ್ದಾನೆ~ ಎಂದು ದೂರಿನಲ್ಲಿ ಆಕೆ ತಿಳಿಸಿದಳು. ಈ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಟ್ಟರು.

ಜಾಮೀನು ನೀಡುವಂತೆ ಕೋರಿ ಆತ ಹೈಕೋರ್ಟ್ ಮೊರೆ ಹೋಗಿದ್ದಾನೆ. `ಆಕೆಯ ಅನುಮತಿ ಪಡೆದುಕೊಂಡೇ ದೈಹಿಕ ಸಂಪರ್ಕ ಹೊಂದಿದ್ದೇನೆ. ಐದು ವರ್ಷಗಳ ಪ್ರೀತಿ ನಮ್ಮದು. ಅವಳ ಮೇಲೆ ನಾನು ಅತ್ಯಾಚಾರ ಎಸಗಿಲ್ಲ. ವಿವಾಹವಾಗಲು ನಾನು ಸಿದ್ಧನಿದ್ದೇನೆ. ಆದರೂ ದೂರು ದಾಖಲು ಮಾಡಿದ್ದಾಳೆ. ನನ್ನ ತಪ್ಪು ಏನೂ ಇಲ್ಲ. ಆದುದರಿಂದ ನನಗೆ ಜಾಮೀನು ನೀಡಿ~ ಎಂದು ಅವನು ನ್ಯಾಯಾಲಯವನ್ನು ಕೋರಿದ್ದಾನೆ.

ಆರೋಪ, ಪ್ರತ್ಯಾರೋಪಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಜಾಮೀನು ಬೇಕಿದ್ದರೆ ವಿವಾಹವಾಗುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.