ADVERTISEMENT

ಆರೋಪಿ ಪತ್ತೆಗೆ ಏಳು ತಂಡ ರಚನೆ

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 20:31 IST
Last Updated 5 ಜನವರಿ 2014, 20:31 IST

ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಶನಿವಾರ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಪತ್ತೆಗೆ ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ.ಪವಾರ್‌ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಲಾಗಿದೆ.

ಮಧುಗಿರಿ ಮೂಲದ ದಂಪತಿ, ಬೇಗೂರು ರಸ್ತೆಯ ಕ್ಲಾಸಿಕ್‌ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಅವರ ಮಗಳು ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದು, ಶನಿವಾರ ಮಧ್ಯಾಹ್ನ ತರಗತಿ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದಾಗ ಈ ಕೃತ್ಯ ನಡೆದಿತ್ತು. ಬಾಲಕಿಯನ್ನು ಹಿಂಬಾಲಿಸಿದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ ನೂತನಲೇಔಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಅಸ್ವಸ್ಥಗೊಂಡ ಬಾಲಕಿ, ಮನೆಗೆ ಹೋಗಿ ಅಜ್ಜಿ ಬಳಿ ಘಟನೆ ಬಗ್ಗೆ ವಿವರಿಸಿದ್ದಳು.

‘ಘಟನೆ ಸಂಬಂಧ ಬಾಲಕಿ ಪೋಷಕರು ಎಲೆಕ್ಟ್ರಾನಿಕ್‌ ಸಿಟಿ ಠಾಣೆಗೆ ದೂರು ಕೊಟ್ಟಿದ್ದಾರೆ. ಸದ್ಯ ಬಾಲಕಿ ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಆರೋಪಿ ಪತ್ತೆಗೆ ಡಿಸಿಪಿ ಪವಾರ್‌ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌ಪಂತ್ ತಿಳಿಸಿದರು.

ಬಾಲಕಿ ತಂದೆ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಪ್ರತಿ ದಿನ ಅವರೇ ಮಗಳನ್ನು ಶಾಲೆಗೆ ಬಿಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರುವಾಗಲೂ ಅವರೇ ಶಾಲೆಯಿಂದ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಶನಿವಾರ ಬೆಳಗಿನ ತರಗತಿ ಇದ್ದುದರಿಂದ ಮಧ್ಯಾಹ್ನ 1.30ರ ಸುಮಾರಿಗೆ ಬಾಲಕಿ ಒಬ್ಬಳೇ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇಂದು ಪ್ರತಿಭಟನೆ: ‘ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಕೆ.ಎಸ್‌. ವಿಮಲಾ ಹೇಳಿದ್ದಾರೆ. ಭಾನುವಾರ
ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಅವರು ಮಾತನಾಡಿದರು.

ಗೃಹ ಸಚಿವರಿಂದ ಪರಿಹಾರ
ಬಾಲಕಿಯನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವಿಷಯ ತಿಳಿದ ಗೃಹ ಸಚಿವ ಕೆ.ಜೆ.ಜಾರ್ಜ್‌, ಶನಿವಾರ ಮಧ್ಯ­ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದರು.

‘ಬಾಲಕಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಜತೆಗೆ ತಾನು ಸಹ ವೈಯಕ್ತಿಕವಾಗಿ ₨ 1 ಲಕ್ಷ ಪರಿಹಾರ ನೀಡುತ್ತೇನೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ’ ಎಂದು ಬಾಲಕಿಯ ಕುಟುಂಬ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT