ಬೆಂಗಳೂರು: `ದ್ವಿಮುಖ ನೆಲೆಯಲ್ಲಿ ಮಹಿಳಾ ಸಬಲೀಕರಣ ಪ್ರಕ್ರಿಯೆಯು ನಡೆಯುತ್ತಿದ್ದು, ಪ್ರಸ್ತುತ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯದ ಜತೆಯಲ್ಲಿಯೇ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ~ ಎಂದು ವಿಮರ್ಶಕಿ ಡಾ.ಎಂ. ಎಸ್. ಆಶಾದೇವಿ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಂತರರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ~ ಪುಸ್ತಕ ಮಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಮಹಿಳೆಯರು ಔದ್ಯೋಗಿಕ ಜಗತ್ತಿನ ವಿಭಿನ್ನ ಸವಾಲುಗಳೊಂದಿಗೆ, ಕೌಟುಂಬಿಕ ಜವಾಬ್ದಾರಿಗಳ ಚೌಕಟ್ಟು ವಿಸ್ತಾರಗೊಂಡಿದೆ.
ಈ ಬಗ್ಗೆಯು ಹೊಸ ನೆಲೆಯಲ್ಲಿ ಚಿಂತನೆ ನಡೆಸಬೇಕು~ ಎಂದ ಅವರು, `ಹೆಣ್ಣು ಮತ್ತು ಸಂಸ್ಕೃತಿ ಪರಸ್ಪರ ಮಿಳಿತಗೊಂಡಿದ್ದು, ಮಹಿಳೆಯ ಸಬಲೀಕರಣಕ್ಕೆ ಸಂಸ್ಕೃತಿ ತೊಡಕಾದ ಉದಾಹರಣೆಯಿಲ್ಲ. ಆದರೆ ಉದ್ಯೋಗ ಮತ್ತು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸಲು ಭಾವನಾತ್ಮಕ ತೊಳಲಾಟದಿಂದ ಹೊರಬರಬೇಕು~ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ವಸುಂಧಾರ ಭೂಪತಿ, ` ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಎಂದು ಘೋಷಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲೂ ಮಹಿಳಾ ಪ್ರಪಂಚಕ್ಕೆ ಸವಾಲಾಗಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು~ ಎಂದು ಹೇಳಿದರು.
ಎಸ್.ಕೆ.ಗೀತಾ ಅವರ ಮಹಿಳಾ ವಿಮೋಚನೆ: ಹೋರಾಟದ ನೂರು ವರ್ಷಗಳು, ಡಾ.ಎನ್.ಗಾಯತ್ರಿ ಅವರ `ಮಹಿಳಾದಿನದ ರೂವಾರಿ - ಕ್ಲಾರಾ ಜೆಟ್‌ಕಿನ್~ ಮತ್ತು ಡಾ.ಮಾಧವಿ ಭಂಡಾರಿ ಅವರ `ನೀನುಂಟು ನಿನ್ನ ರಕ್ಕೆಗಳುಂಟು~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಡಾ.ಕೆ.ಷರೀಫಾ, ಕೆ.ಎಸ್. ವಿಮಲಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.