ADVERTISEMENT

ಆಲಮಟ್ಟಿ ಅಣೆಕಟ್ಟು: ಭೂಸ್ವಾಧೀನ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಬೆಂಗಳೂರು: ‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಆಲಮಟ್ಟಿ ಅಣೆಕಟ್ಟೆಯ ಯೂನಿಟ್‌–3ಕ್ಕೆ ಬೇಕಾಗುವ ಜಮೀನಿನ ಸ್ವಾಧೀನ ಮಾಡಿ­ಕೊಳ್ಳು­ತ್ತಿರುವುದನ್ನು ನಿಲ್ಲಿಸಬೇಕು’ ಎಂದು ಸಂಯುಕ್ತ ಜನತಾ­ದಳ ಅಧ್ಯಕ್ಷ ಎಂ.ಪಿ.ನಾಡಗೌಡ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೂನಿಟ್‌–2 ರ ಕಾರ್ಯವನ್ನು ಕೈಗೊಂಡಿದ್ದು ಇನ್ನೂ ಆರಂಭದ ಹಂತದಲ್ಲಿದೆ. ಆದರೂ, ಯೂನಿಟ್‌–3 ಕ್ಕೆ ಬೇಕಾಗುವ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿರುವುದರಿಂದ ರೈತರಿಗೆ ಅನ್ಯಾಯ ವಾಗುತ್ತಿದೆ. ಯುನಿಟ್‌–1 ಹಾಗೂ ಯುನಿಟ್‌–2 ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು 30 ವರ್ಷಗಳನ್ನು ತೆಗೆದುಕೊಂಡಿದೆ’ ಎಂದರು.

‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ 4,544 ಎಕರೆ ಜಮೀನನ್ನು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀ ವರೆಗೆ ನಿಗದಿಪಡಿಸಿ, ಬಾಗಲಕೋಟೆ ನಗರದಲ್ಲಿ ಮುಳುಗಡೆ ಆಗುವ ಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸುವ
ಸಲುವಾಗಿ ಸ್ವಾಧೀನಪಡಿಸಿಕೊಂಡಿದೆ’ ಎಂದು ಹೇಳಿದರು.

‘ಜಮೀನನ್ನು ಸ್ವಾಧೀನಪಡಿಸಿಕೊಂಡ ಉದ್ದೇಶವನ್ನು ಹೊರತುಪಡಿಸಿ ಹೆಚ್ಚುವರಿ ಜಮೀನನ್ನು ಸರ್ಕಾರಿ, ಸರ್ಕಾರೇತರ ಖಾಸಗಿ ಸಂಸ್ಥೆಗಳಿಗೆ ಹಾಗೂ ಸಹಕಾರಿ ಸಂಘ ಸಂಸ್ಥೆಗಳಿಗೆ 868 ಎಕರೆ ಜಮೀನನ್ನು ನೀಡಲಾಗಿದೆ. ಈ ಎಲ್ಲಾ ಜಮೀನಿನ ಬಗ್ಗೆ ತನಿಖೆ ಮಾಡಿ ಕಾನೂನು ಬಾಹಿರವಾಗಿ ಹಂಚಿಕೆಯಾದ ನಿವೇಶನ-­ಗಳನ್ನು ಹಿಂದಕ್ಕೆಪಡೆಯಬೇಕು’ ಎಂದು ಒತ್ತಾಯಿಸಿದರು.

‘ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆಂದು 300 ಎಕರೆ ಜಮೀನು ನೀಡಲಾಗಿದೆ. ದುರುದ್ದೇಶದಿಂದ ಖಾಸಗಿ ಕೈಗಾರಿಕೆಗಳಿಗೆ ಜಮೀನು ನೀಡಲಾಗಿದೆ. ಆದರೆ, ಅಲ್ಲಿ ಯಾವುದೇ ರೀತಿಯ ಕೈಗಾರಿಕೆಗಳು ಸ್ಥಾಪನೆಯಾಗದೇ ಜಮೀನನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಸಂತ್ರಸ್ಥರಲ್ಲದವರಿಗೆ 1,856 ನಿವೇಶನಗಳನ್ನು ಹೆಚ್ಚಿನ ಬೆಲೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಮಾರಾಟ ಮಾಡಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.