ADVERTISEMENT

ಆಸ್ತಿ ರಕ್ಷಣೆಗೆ ಕೀರ್ಮಾನಿ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:53 IST
Last Updated 6 ಡಿಸೆಂಬರ್ 2013, 19:53 IST

ಬೆಂಗಳೂರು: ಸ್ಟಂಪ್‌ ಹಿಂದೆ ಚಾಣಾಕ್ಷ ಕೀಪರ್‌ ಆಗಿ ಸಯ್ಯದ್‌ ಕೀರ್ಮಾನಿ ಹೆಸರು ಮಾಡಿರಬಹುದು. ಆದರೆ, ಚಂದ್ರಾ ಲೇಔಟ್‌ನಲ್ಲಿರುವ ತಮ್ಮ ಸಹೋದ­ರನ ಆಸ್ತಿ ರಕ್ಷಿಸಲು ಅವರು ಪರದಾಡುತ್ತಿದ್ದಾರೆ. ಚಂದ್ರಾ ಲೇಔಟ್‌ನಲ್ಲಿರುವ ತಮ್ಮ ಸಹೋದರನ 4,000 ಚದರ ಅಡಿ ವಿಸ್ತೀರ್ಣದ ನಿವೇಶನ ಉಳಿಸಿಕೊಳ್ಳಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

‘ಪಾಲಿಕೆ ಸದಸ್ಯರೊಬ್ಬರು ತಮ್ಮ ವಾಹನ ಚಾಲಕನ ಮೂಲಕ ನಿವೇಶನ ವನ್ನು ಅತಿಕ್ರಮಣ ಮಾಡಿದ್ದಾರೆ. ಆ ನಿವೇಶನದಲ್ಲಿ ಸ್ಮಶಾನವಿತ್ತು ಎಂದು ಸುಳ್ಳು ದಾಖಲೆ ಸೃಷ್ಟಿಸಿ, ದೂರನ್ನೂ ಕೂಡ ಸಲ್ಲಿಸಿದ್ದಾರೆ’ ಎಂದು ಕೀರ್ಮಾನಿ ದೂರಿದರು. ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹಾಗೂ ಬಿಬಿಎಂಪಿ ಆಯುಕ್ತ ಎಂ.­ಲಕ್ಷ್ಮಿನಾರಾಯಣ ಅವರಿಗೆ ಶುಕ್ರವಾರ ದೂರು ನೀಡಿದ ಅವರು, ತಮ್ಮ ಆಸ್ತಿಗೆ ಸಂಬ­ಂಧಿಸಿದ ದಾಖಲೆಗಳನ್ನೂ ನೀಡಿದರು.

‘ಚಂದ್ರಾ ಲೇಔಟ್‌ನ ನಿವೇಶನ ಸಂಖ್ಯೆ 238 ನನ್ನ ಸಹೋದರ ಎಸ್‌.ಎಂ.ಎ.ಎಚ್‌. ಕೀರ್ಮಾನಿ ಅವರಿಗೆ ಸೇರಿದೆ. ಹತ್ತು ವರ್ಷಗಳ ಹಿಂದೆ ಐಟಿಐ ಹೌಸಿಂಗ್‌ ಸೊಸೈಟಿಯಿಂದ ಈ ನಿವೇಶನ ಹಂಚಿಕೆಯಾಗಿದೆ’ ಎಂದು ಅವರು ಹೇಳಿದರು. ‘ಭೂಗಳ್ಳರಿಂದ ನನ್ನ ಸಹೋದರನ ನಿವೇಶನ ರಕ್ಷಿಸಲು ಆಗದೆ ಪೊಲೀಸರೂ ಅಸಹಾಯಕ ರಾಗಿದ್ದಾರೆ. ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಹೆಚ್ಚುವರಿ ಪೊಲೀಸ್‌ ಆಯುಕ್ತರನ್ನು (ಕಾನೂನು ಮತ್ತು ಸುವ್ಯವಸ್ಥೆ) ಸಹ ಭೇಟಿ ಮಾಡಿದ್ದೇನೆ. ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ನೋವು ತೋಡಿಕೊಂಡರು.

1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡದ ಸದಸ್ಯ­ರಾಗಿದ್ದ ಅವರಿಗೆ ನಿವೇಶನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ‘ಸರ್ಕಾರ ಬಹುಮಾನ ರೂಪವಾಗಿ ಘೋಷಿಸಿದ ನಿವೇಶನ ಇನ್ನೂ ಸಿಕ್ಕಿಲ್ಲ’ ಎಂದೂ ಹೇಳಿ­ದರು.­ ‘ಕೀರ್ಮಾನಿ ದೂರನ್ನು ಪರಿಶೀಲಿಸಿ, ಅವರಿಗೆ ಬಿಬಿಎಂಪಿ ಯಿಂದ ಸಾಧ್ಯವಿರುವ ನೆರವು ನೀಡಲಾಗು­ವುದು’ ಎಂದು ಮೇಯರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT