ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ; 45 ರೋಗಿಗಳು ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 20:12 IST
Last Updated 14 ಜೂನ್ 2017, 20:12 IST
ರೋಗಿಗಳನ್ನು ಸ್ಥಳಾಂತರಿಸುತ್ತಿರುವ ಆಸ್ಪತ್ರೆ ಸಿಬ್ಬಂದಿ  –ಪ್ರಜಾವಾಣಿ ಚಿತ್ರ
ರೋಗಿಗಳನ್ನು ಸ್ಥಳಾಂತರಿಸುತ್ತಿರುವ ಆಸ್ಪತ್ರೆ ಸಿಬ್ಬಂದಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಯನಗರ 9ನೇ ಹಂತದಲ್ಲಿರುವ ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ 1ನೇ ಮಹಡಿಯ ಯುಪಿಎಸ್ ಕೊಠಡಿಯಲ್ಲಿ ಶಾರ್ಟ್‌ ಸರ್ಕೀಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿತು. ನೋಡ ನೋಡುತ್ತಲೇ ಹೊಗೆಯು ಇಡೀ ಕಟ್ಟಡವನ್ನು ಆವರಿಸಿತು.

ಈ ಸಮಯದಲ್ಲಿ ಆಸ್ಪತ್ರೆಯಲ್ಲಿ 45 ರೋಗಿಗಳಿದ್ದರು. ಕೂಡಲೇ ಎಚ್ಚೆತ್ತ ಸಿಬ್ಬಂದಿ, ಎಲ್ಲ ರೋಗಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದರು.
ಕೆಲ ರೋಗಿಗಳನ್ನು ಸಮೀಪದ ನರ್ಸಿಂಗ್ ಹೋಂಗಳಿಗೆ ಸ್ಥಳಾಂತರ ಮಾಡಲಾಯಿತು. ಮತ್ತೆ ಕೆಲವರನ್ನು ಎಚ್‌ಎಎಲ್‌ ಸಮೀಪದ ಮಣಿಪಾಲ್ ಸಮೂಹದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

ಅವಘಡ ಸಂಭವಿಸಿದ ಎಂಟು ನಿಮಿಷಗಳಲ್ಲೇ ಎರಡು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

‘ಹೊಗೆ ಆವರಿಸಿರುವುದನ್ನು ಕಂಡು ಆರಂಭದಲ್ಲಿ ದೊಡ್ಡ ಪ್ರಮಾಣದ ದುರಂತವೆಂದೇ ಭಾವಿಸಿದ್ದೆವು.  ಅದೃಷ್ಟವಷಾತ್ ಬೆಂಕಿ ಕಟ್ಟಡವನ್ನು ವ್ಯಾಪಿಸಿರಲಿಲ್ಲ.  ಮುಂಜಾಗ್ರತಾ ಕ್ರಮವಾಗಿ 40 ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದೆವು’ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು.
***
ನಾಲ್ಕೇ ತಾಸಿನಲ್ಲಿ ಸೇವೆ ಆರಂಭ

‘ಕಟ್ಟಡದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರತಿ ಮಹಡಿಯಲ್ಲೂ ಅಗ್ನಿನಂದಕ ಸಲಕರಣೆಗಳನ್ನು ಅಳವಡಿಸಿದ್ದೇವೆ. ನಮ್ಮ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅವಘಡ ಸಂಭವಿಸಿದ 4 ತಾಸುಗಳಲ್ಲೇ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಆಸ್ಪತ್ರೆಯ ಚಟುವಟಿಕೆಗಳು ಎಂದಿನಂತೆ ಪುನರಾರಂಭಗೊಂಡಿವೆ’ ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಮೋದ್ ಅಲಗಾರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.