ಬೆಂಗಳೂರು: ಸರ್ಕಾರದ ವಶಕ್ಕೆ ಪಡೆದಿರುವ ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತೆ ಖಾಸಗಿಯವರ ವಶಕ್ಕೆ ನೀಡುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬುಧವಾರ ಇಲ್ಲಿ ತಿಳಿಸಿದರು.
ಹೈದರಾಬಾದ್‌ನ ಅಪೋಲೊ ಆಸ್ಪತ್ರೆಯ ಸಮೂಹಕ್ಕೆ ನೀಡಿದ್ದ ಗುತ್ತಿಗೆ ಅವಧಿ ಮೇ 31ಕ್ಕೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ವೈದ್ಯಕೀಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಒತ್ತಡಕ್ಕೆ ಮಣಿದು ಮತ್ತೆ ಗುತ್ತಿಗೆಗೆ ನೀಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅಪೋಲೊಗೆ ಹಸ್ತಾಂತರಿಸುವ ವೇಳೆ ಇದ್ದ ಆಸ್ಪತ್ರೆಯ ಉಪಕರಣಗಳ ಪೈಕಿ ಕೆಲವೊಂದನ್ನು ಸಾಗಿಸಿದ್ದಾರೆ. ಹೀಗಾಗಿ ಅಪೋಲೊಗೆ ನೀಡಬೇಕಾಗಿದ್ದ ಎರಡು ಕೋಟಿ ರೂಪಾಯಿ ಡೆ ಹಿಡಿಯಲಾಗಿದೆ. ಉಪಕರಣಗಳನ್ನು ನೀಡಿದರೆ ಅಥವಾ ನಷ್ಟ ತುಂಬಿಕೊಟ್ಟರೆ ಮಾತ್ರ ಬಾಕಿ ಹಣ ನೀಡಲಾಗುವುದು ಎಂದರು.
ಗುತ್ತಿಗೆ ಮುಂದುವರಿಸುವಂತೆ ಅಲ್ಲಿನ 256 ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಅಲ್ಲದೆ ಈ ಸಂಬಂಧ ಗುಲ್ಬರ್ಗದ ಸಂಚಾರಿ ಪೀಠದಲ್ಲಿ ಮೊಕದ್ದಮೆ ಹೂಡಲಾಗಿದೆ. ಸರ್ಕಾರ ನ್ಯಾಯಾಲಯಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.