ADVERTISEMENT

‘ಆ ದಿನ ನೆನೆದರೆ ಭಯವಾಗುತ್ತದೆ’: ಕ್ರೌರ್ಯದ ಬಗ್ಗೆ ಹೇಳಿಕೆ ನೀಡಿದ ವಿದ್ವತ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 20:13 IST
Last Updated 3 ಮಾರ್ಚ್ 2018, 20:13 IST
ವಿದ್ವತ್
ವಿದ್ವತ್   

ಬೆಂಗಳೂರು: ‘ನಾನು ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಮೊಹಮದ್ ನಲಪಾಡ್‌ ಹಾಗೂ ಆತನ ಸಹಚರರಿಗೆ ಕ್ಷಮೆ ಕೋರಿದೆ. ಆದರೂ, ಜಗಳ ತೆಗೆದು ಮನಬಂದಂತೆ ಹೊಡೆದರು. ಬಿಯರ್ ಬಾಟಲಿ ಹಾಗೂ ನಕಲ್ ರಿಂಗ್‌ನಿಂದ ಹೊಡೆದಾಗ ನಾನು ಕುಸಿದು ಬಿದ್ದೆ’ ಎಂದು ವಿದ್ವತ್ ಸಿಸಿಬಿ ಪೊಲೀಸರಿಗೆ ಹೇಳಿದ್ದಾರೆ.

ಶನಿವಾರ ಸಂಜೆ ಪುನಃ ಮಲ್ಯ ಆಸ್ಪತ್ರೆಗೆ ತೆರಳಿದ್ದ ಪ್ರಕರಣದ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಅಶ್ವತ್ಥ್‌ಗೌಡ, ಅಂದಿನ ಘಟನೆ ಬಗ್ಗೆ ವಿದ್ವತ್ ಅವರಿಂದ ಪೂರ್ಣ ಮಾಹಿತಿ ಪಡೆದುಕೊಂಡರು.

ವಿದ್ವತ್ ಹೇಳಿಕೆ: ‘ಫೆ.17ರ ರಾತ್ರಿ ಫರ್ಜಿ ಕೆಫೆಗೆ ಊಟಕ್ಕೆ ಹೋದಾಗ ನನ್ನ ಕಾಲು ನಲಪಾಡ್‌ನ ಸ್ನೇಹಿತನಿಗೆ ತಾಕಿತು. ಆ ಕೂಡಲೇ ನಾನು ಕ್ಷಮೆ ಕೋರಿದೆ. ಆಗ ಒಬ್ಬಾತ, ‘ಏನೋ ಅಣ್ಣನ ಎದುರೇ ಕಾಲು ಚಾಚಿಕೊಂಡು ಕುಳಿತಿದ್ದೀಯಾ’ ಎನ್ನುತ್ತಾ ಗಲಾಟೆ ಪ್ರಾರಂಭಿಸಿದ. ಕಾಲಿನ ಮೂಳೆ ಮುರಿದಿರುವುದಾಗಿ ನಾನು ಹೇಳಿದಾಗ, ‘ಅಣ್ಣನ ಮುಂದೆಯೇ ಎದುರು ಮಾತನಾಡುತ್ತೀಯಾ’ ಎಂದು ಕೆನ್ನೆಗೆ ಹೊಡೆದ. ನಂತರ ನನ್ನ ಸ್ನೇಹಿತರು ರಕ್ಷಣೆಗೆ ಮುಂದಾದಾಗ, ಎಲ್ಲರೂ ಸೇರಿ ಹಲ್ಲೆ ಮಾಡಿದರು.’

ADVERTISEMENT

‘ಬಾಟಲಿಯಿಂದ ಹೊಡೆಯುತ್ತಿದ್ದಂತೆಯೇ ಮೂಗಿನಿಂದ ರಕ್ತ ಸುರಿಯಲಾರಂಭಿಸಿತು. ಅಷ್ಟಕ್ಕೂ ಸುಮ್ಮನಾಗದೆ, ಬಟ್ಟೆ ಹರಿದು ಪುನಃ ಹೊಡೆದರು. ಅಸ್ವಸ್ಥನಾಗಿ ಬಿದ್ದ ನನ್ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಲು ಕಾರಿನ ಹತ್ತಿರ ಕರೆದುಕೊಂಡು ಹೋದರು. ಅಲ್ಲೂ ನನ್ನ ಮೇಲೆ ದಾಳಿ ನಡೆಯಿತು. ಕೊನೆಗೆ, ಆಸ್ಪತ್ರೆಗೂ ನುಗ್ಗಿ ಹಲ್ಲೆ ನಡೆಸಿದರು.’

‘ನಲಪಾಡ್‌ನನ್ನು ನಾನು ಹಿಂದೆ ಪಾರ್ಟಿಗಳಲ್ಲಿ ನೋಡುತ್ತಿದ್ದೆ. ಆದರೆ, ಒಮ್ಮೆಯೂ ಆತನೊಂದಿಗೆ ಮಾತನಾಡಿರಲಿಲ್ಲ. ಆ ದಿನದ ಕ್ರೌರ್ಯ ನೆನೆದರೆ ಈಗಲೂ ಭಯವಾಗುತ್ತದೆ’ ಎಂದು ವಿದ್ವತ್ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.