ADVERTISEMENT

ಇಂಗ್ಲಿಷ್ ಕಲಿಕೆ- ಹೆಚ್ಚಿದ ಅನಿವಾರ್ಯತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 19:15 IST
Last Updated 26 ಫೆಬ್ರುವರಿ 2012, 19:15 IST

ಯಲಹಂಕ: ಜಾಗತಿಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಮತ್ತು ಅಗತ್ಯತೆ ಹೆಚ್ಚಾಗಿದ್ದು, ಈ ದಿಸೆಯಲ್ಲಿ ಆಂಗ್ಲಭಾಷೆ ಕಲಿಯಲು ಸರ್ಕಾರಿ ಶಾಲೆಯ ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ವಿಶ್ವಾಸವನ್ನು ತುಂಬುವ ಕಾರ್ಯ ಆಗಬೇಕಾಗಿದೆ ಎಂದು ಇನ್ಸ್‌ಟಿಟ್ಯೂಟ್ ಆಫ್ ಲೀಡರ್‌ಶಿಪ್ ಅಂಡ್ ಇನ್ಸ್‌ಟಿಟ್ಯೂಷನಲ್ ಡೆವಲಪ್‌ಮೆಂಟ್ (ಐಎಲ್‌ಐಡಿ) ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಯರಾಂ ಹೇಳಿದರು.

ಅಚಲ ಭಾರತಿ, ಐಲಿಡ್ ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ತಿಂಡ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವನಸುಮ `ಮಕ್ಕಳ ಮೇಳ~ ಸಮಾರಂಭದಲ್ಲಿ ಮಾತನಾಡಿದ ಅವರು, ಅಚಲ ಭಾರತಿ ಸಂಸ್ಥೆಯವರು ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿನೂತನ ಹಾಗೂ ಸರಳ ರೀತಿಯಲ್ಲಿ ಕಂಪ್ಯೂಟರ್ ಮೂಲಕ ಆಂಗ್ಲ ಭಾಷೆಯನ್ನು ಕಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು.

ಶಾಸಕ ಕೃಷ್ಣಬೈರೇಗೌಡ, ಆಧುನಿಕ ಪ್ರಪಂಚದಲ್ಲಿ ಬಡತನದಿಂದ ಹೊರಬರಲು ಹಾಗೂ ಬದಲಾವಣೆಗೆ ಸರ್ಕಾರಿ ಶಾಲೆಯ ಮಕ್ಕಳಿಗೂ ಆಂಗ್ಲಭಾಷೆಯನ್ನು ಕಲಿಸಬೇಕಾದುದು ಅತ್ಯವಶ್ಯಕ. ಈ ಭಾಷೆಯನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಜೀವನವನ್ನು ಉತ್ತಮ ಮಟ್ಟದಲ್ಲಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಸಾಹಿತಿ ಪ್ರೊ.ಅ.ರಾ.ಮಿತ್ರ ಮಾತನಾಡಿ, ಹಳ್ಳಿಯ ಕನ್ನಡ ಶಾಲೆಯ ಮಕ್ಕಳು ಆಂಗ್ಲ ಶಾಲೆಯ ಮಕ್ಕಳಿಗಿಂತ ಹೆಚ್ಚಿನ ರೀತಿಯಲ್ಲಿ ಆಂಗ್ಲ ಭಾಷೆಯನ್ನು ಕಲಿಯಲು ಸಂಕಲ್ಪ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಬಹುಮಾನ: ಮೇಳದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಜಯರಂಗ, ನಗರಸಭೆ ಮಾಜಿ ಅಧ್ಯಕ್ಷ ಎಂ.ಹನುಮಂತೇಗೌಡ, ಮಾಜಿ ಸದಸ್ಯ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಆನಂದ್, ಇ.ಕೃಷ್ಣಪ್ಪ, ವಿ.ಹರಿ, ಶ್ರೀನಿವಾಸ್, ಸಮಾಜ ಸೇವಕಿ ಮೀನಾಕ್ಷಿ ಶೇಷಾದ್ರಿ, ಅಚಲ ಭಾರತಿ ಸಂಸ್ಥೆಯ ಸಂಸ್ಥಾಪಕರಾದ ಸೌಮ್ಯ ಮಿತ್ರ ಹಾಗೂ ಗೌತಮ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.