ಬೆಂಗಳೂರು: ಶಾಲಾ ವಾಹನಗಳ ಸುರಕ್ಷತೆಯ ಮಾರ್ಗಸೂಚಿ ಜಾರಿಯಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿ ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ನಡೆಸುತ್ತಿದ್ದ ಮೂರು ದಿನಗಳ ಮುಷ್ಕರ ಶುಕ್ರವಾರಕ್ಕೆ ಕೊನೆಗೊಂಡಿದೆ.
`ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಶುಕ್ರವಾರ ಮಾತುಕತೆ ನಡೆಸಲಾಯಿತು. ನಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯವರೊಡನೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಶನಿವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಶನಿವಾರದಿಂದ ಶಾಲಾ ವಾಹನಗಳು ಎಂದಿನಂತೆ ಸಂಚರಿಸಲಿವೆ' ಎಂದು ಸಂಘದ ಅಧ್ಯಕ್ಷ ಪಿ.ಎಸ್. ಷಣ್ಮುಗಂ ತಿಳಿಸಿದರು.
ಶಾಲೆಗಳ ಮಾಲೀಕತ್ವದ ಶಾಲಾ ವಾಹನಗಳಿಗೆ ವರ್ಷಕ್ಕೆ ರೂ1,500 ತೆರಿಗೆ ಇದ್ದರೆ, ಖಾಸಗಿ ಶಾಲಾ ವಾಹನಗಳಿಗೆ ವರ್ಷಕ್ಕೆ ರೂ 22 ಸಾವಿರ ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ಪ್ರಮಾಣವನ್ನು ಸರ್ಕಾರ ತಗ್ಗಿಸಬೇಕು. 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಮಾರ್ಗಸೂಚಿಯಿಂದ ವಿನಾಯ್ತಿ ನೀಡಬೇಕು. ಮಾರ್ಗಸೂಚಿ ಜಾರಿ ಹೆಸರಿನಲ್ಲಿ ಪೊಲೀಸರ ಕಿರುಕುಳ ನಿಲ್ಲಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರದಿಂದ (ಜೂ.19) ಮೂರು ದಿನಗಳ ಮುಷ್ಕರಕ್ಕೆ ಶಾಲಾ ವಾಹನ ಚಾಲಕರ ಸಂಘ ಕರೆ ನೀಡಿತ್ತು.
ಮುಷ್ಕರದಿಂದಾಗಿ ಮೂರು ದಿನಗಳೂ ನಗರದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ತೀವ್ರ ಅನನುಕೂಲ ಉಂಟಾಗಿತ್ತು. ಸ್ವಂತ ವಾಹನ ಉಳ್ಳವರು ಮಕ್ಕಳನ್ನು ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟರೆ, ಉಳಿದವರು ಆಟೊ ಹಾಗೂ ಬಸ್‌ಗಳ ಮೊರೆ ಹೋಗಬೇಕಾಯಿತು. ಮುಷ್ಕರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲು ಬಿಎಂಟಿಸಿ ಹೆಚ್ಚಿನ ಬಸ್‌ಗಳ ವ್ಯವಸ್ಥೆಯನ್ನೂ ಮಾಡಿತ್ತು.
`15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ವಿನಾಯ್ತಿ ನೀಡುವ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಚಾರ ತಜ್ಞರ ಸಭೆಯನ್ನೂ ಕರೆಯಲಾಗುವುದು ಎಂದು ಅವರು ಹೇಳಿದ್ದಾರೆ. ಸಚಿವರ ಭರವಸೆಯಿಂದ ನಮಗೆ ನ್ಯಾಯ ಸಿಗುವ ವಿಶ್ವಾಸ ಮೂಡಿದೆ. ಹೀಗಾಗಿ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ. ಶನಿವಾರ ಸಂಘದ ಸರ್ವ ಸದಸ್ಯರ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸುತ್ತೇವೆ' ಎಂದು ಷಣ್ಮುಗಂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.