ADVERTISEMENT

ಇಂದು ನನಸಾಗಲಿರುವ ಮೆಟ್ರೊ ಮಹಾ ಕನಸು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು: `ನಮ್ಮ ಮೆಟ್ರೊ~ ಎಂಬ ಮಹಾ ಕನಸು ನನಸಾಗುವ ದಿಸೆಯಲ್ಲಿ ಗುರುವಾರ (ಅ. 20) ಮಹತ್ವದ ದಿನ; ರಾಜಧಾನಿಯ ನಾಲ್ಕು ದಿಕ್ಕುಗಳಿಗೂ ತ್ವರಿತ, ಸುರಕ್ಷಿತ ಮತ್ತು ಸುಖದಾಯಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಾಕಾರಗೊಳ್ಳುತ್ತಿರುವ ಮೆಟ್ರೊ ಯೋಜನೆಯ ಒಂದು ಭಾಗ ಲೋಕಾರ್ಪಣೆಗೊಳ್ಳಲಿದೆ.

ಮೊದಲ ಹಂತದ ಯೋಜನೆಯಲ್ಲಿ ನಗರದ ಪೂರ್ವ ಭಾಗದ ಬೈಯಪ್ಪನಹಳ್ಳಿಯಿಂದ ಪಶ್ಚಿಮದ ಮೈಸೂರು ರಸ್ತೆಯ ನಾಯಂಡನಹಳ್ಳಿವರೆಗೆ, ಉತ್ತರದ ಹೆಸರಘಟ್ಟ ಕ್ರಾಸ್‌ನಿಂದ ದಕ್ಷಿಣದ ಪುಟ್ಟೇನಹಳ್ಳಿವರೆಗೆ ಒಟ್ಟು 42.30 ಕಿ.ಮೀ. ಉದ್ದದಷ್ಟು ರೈಲು ಮಾರ್ಗ ನಿರ್ಮಾಣ ಆಗಬೇಕಿದ್ದು, ಈ ಪೈಕಿ 6.7 ಕಿ.ಮೀ. ಉದ್ದದ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ರೀಚ್- 1ರ ಮಾರ್ಗವು ಸಂಚಾರಕ್ಕೆ ಸಿದ್ಧವಾಗಿದೆ. ಉಳಿದ 35.6 ಕಿ.ಮೀ. ಮಾರ್ಗದ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿದೆ.

ನಗರದ ಕೇಂದ್ರ ಭಾಗವಾದ ವಿಧಾನಸೌಧ ಮತ್ತು ಮೆಜೆಸ್ಟಿಕ್ ಪ್ರದೇಶಗಳಿಂದ ನಾಲ್ಕು ದಿಕ್ಕುಗಳ ಕಡೆಗೆ ರೈಲು ಮಾರ್ಗ ನಿರ್ಮಾಣ ಪೂರ್ಣಗೊಳ್ಳದ ಹೊರತು ಮೆಟ್ರೊ ಯೋಜನೆಯ ಪ್ರಯೋಜನದ ಸಂಪೂರ್ಣ ಅನುಭವ ಸಾರ್ವಜನಿಕರಿಗೆ ಆಗಲು ಸಾಧ್ಯವಿಲ್ಲ.

ADVERTISEMENT

ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಾರ ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ 2013ರ ಮಾರ್ಚ್ ವೇಳೆಗೆ ರೈಲು ಓಡಾಟ ಪ್ರಾರಂಭವಾಗಲಿದೆ.

ಸ್ವಸ್ತಿಕ್ ವೃತ್ತದಿಂದ- ಯಶವಂತಪುರ- ಹೆಸರಘಟ್ಟ ಕ್ರಾಸ್‌ವರೆಗಿನ ರೀಚ್- 3, 3ಎ ಮತ್ತು 3ಬಿ ಮಾರ್ಗದಲ್ಲಿ 2012ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಉಳಿದಂತೆ ಸ್ವಸ್ತಿಕ್‌ನಿಂದ ಕೆ.ಆರ್. ರಸ್ತೆ ಪ್ರವೇಶದ್ವಾರದವರೆಗಿನ ಯು.ಜಿ.- 1 ಮತ್ತು ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಯು.ಜಿ.- 2ರ ಸುರಂಗ ಮಾರ್ಗ, ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗಿನ ರೀಚ್- 2, ಕೆ.ಆರ್.ರಸ್ತೆಯಿಂದ- ಸೌತ್ ಎಂಡ್ ವೃತ್ತ- ಬನಶಂಕರಿ- ಪುಟ್ಟೇನಹಳ್ಳಿವರೆಗಿನ ರೀಚ್- 4 ಮತ್ತು ರೀಚ್- 4 ಎ ಮಾರ್ಗದಲ್ಲಿ 2013ರ ಮಾರ್ಚ್ ಅಂತ್ಯದ ವೇಳೆಗೆ ರೈಲುಗಳ ಸಂಚಾರ ಶುರುವಾಗಲಿದೆ.

ಮೊದಲ ಹಂತದಲ್ಲಿ 8.82 ಕಿ.ಮೀ. ಉದ್ದದ ಸುರಂಗ ಸೇರಿ ಒಟ್ಟು 42.30 ಕಿ.ಮೀ ಉದ್ದದ ಮಾರ್ಗ ನಿರ್ಮಾಣವಾಗಲಿದೆ. ಇದರ ಮೊದಲಿನ ಅಂದಾಜು ವೆಚ್ಚ ರೂ 8,158 ಕೋಟಿ; ಪರಿಷ್ಕರಣೆಯ ನಂತರ ಅಂದಾಜು ವೆಚ್ಚ ರೂ 11,609 ಕೋಟಿ. ರೀಚ್- 1ರ ಮಾರ್ಗದ ನಿರ್ಮಾಣಕ್ಕೆ ಅಂದಾಜು ರೂ 1,400 ಕೋಟಿ ವೆಚ್ಚ ಆಗಿದೆ. ಇದರಲ್ಲಿ ಎತ್ತರಿಸಿದ ಮಾರ್ಗದ ಸಿವಿಲ್ ಕಾಮಗಾರಿ/ ಜೋಡಿ ಹಳಿ ಮಾರ್ಗ/ ಸಿಗ್ನಲ್, ವಿದ್ಯುತ್ ಮತ್ತಿತರ ವ್ಯವಸ್ಥೆಗಳಿಗೆ ರೂ 1000 ಕೋಟಿ, ಐದು ರೈಲುಗಾಡಿಗಳಿಗೆ ರೂ 150 ಕೋಟಿ, ಆರು ನಿಲ್ದಾಣಗಳಿಗೆ ರೂ 250 ಕೋಟಿ ಖರ್ಚು ಮಾಡಿರುವುದು ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.