ADVERTISEMENT

ಇಂದು ವಿಶ್ವ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಇಂದು ವಿಶ್ವ ಕಲ್ಯಾಣೋತ್ಸವ
ಇಂದು ವಿಶ್ವ ಕಲ್ಯಾಣೋತ್ಸವ   

ಬೆಂಗಳೂರು: ರೋಟರಿ ಬೆಂಗಳೂರು ಇಂಟರ್‌ನ್ಯಾಷನಲ್ (ಡಿಸ್ಟ್ರಿಕ್ 3190) ಸಂಸ್ಥೆಯು ನಗರದ ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಇದೇ 4 ಹಾಗೂ 5ರಂದು `ವಿಶ್ವ ಕಲ್ಯಾಣೋತ್ಸವ~ 35ನೇ ಸಮ್ಮೇಳನವನ್ನು ಹಮ್ಮಿಕೊಂಡಿದೆ.

ಬಡ ಮಕ್ಕಳ ಕಲ್ಯಾಣಕ್ಕಾಗಿ ಸಂಸ್ಥೆಯು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳಿಗೆ ಸಮ್ಮೇಳನದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ.

ನಗರದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಬೆಂಗಳೂರು ಇಂಟರ್‌ನ್ಯಾಷನಲ್‌ನ ಜಿಲ್ಲಾ ಗವರ್ನರ್ ಎಸ್. ನಾಗೇಂದ್ರ, `ಈ ಬಾರಿ ಬಡ ಮಕ್ಕಳ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯವಾಗಿ 15 ವರ್ಷದೊಳಗಿನ 60 ಮಕ್ಕಳಿಗೆ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ಕಿಮೋಥೆರಪಿ ಚಿಕಿತ್ಸೆ ನೀಡಲಾಗುವುದು. 250 ಮಂದಿ ಬಡ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ~ ಎಂದರು.

`ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪದಕೋಶ ವಿತರಿಸಲಾಗುವುದು. ಹಾಗೆಯೇ 106 ಸರ್ಕಾರಿ ಬಾಲಕಿಯರ ವಸತಿ ಶಾಲೆಗಳಿಗೆ ಸೌರದೀಪ ವಿತರಿಸುವ ಯೋಜನೆ ಕೂಡ ಇದೆ. ಬಡ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದರು.

`ಫೆ. 4ರಂದು ನಡೆಯಲಿರುವ ಸಂಸ್ಥೆಯ 35ನೇ ಸಮ್ಮೇಳನದಲ್ಲಿ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಅನಂತಕುಮಾರ್ ಭಾಗವಹಿಸಲಿದ್ದಾರೆ. ಪೇಜಾವರ ಮಠದ ವಿಶ್ವೇಶತೀರ್ಥರು `ವಿಶ್ವ ಕಲ್ಯಾಣೋತ್ಸವ~ ಕುರಿತು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ- ಪ್ರಯೋಜನ ಮತ್ತು ತೊಂದರೆ ವಿಷಯ ಕುರಿತು ಸಂವಾದ ಏರ್ಪಡಿಸಲಾಗಿದೆ~ ಎಂದು ಮಾಹಿತಿ ನೀಡಿದರು.

ಅಮೆರಿಕ ಅಲಬಾಮದ ರೋಟರಿ ಇಂಟರ್ ನ್ಯಾಷನಲ್ ಘಟಕದ ಮಾಜಿ ನಿರ್ದೇಶಕ ಮಾರ್ಕ್ ಮಲೋನಿ, `ಸಂಸ್ಥೆಯು ಆರೋಗ್ಯ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುತ್ತಿದೆ. ಅದರಂತೆ ಪೋಲಿಯೊ ನಿರ್ಮೂಲನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ~ ಎಂದರು.

`ಬಡ ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದ್ದು, ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ~ ಎಂದು ಹೇಳಿದರು.

ರೋಟರಿ ಬೆಂಗಳೂರು ಇಂಟರ್‌ನ್ಯಾಷನಲ್‌ನ ಕಾರ್ಯದರ್ಶಿ ಡಾ. ಸಮೀರ್ ಹರಿಯಾನಿ, ಮಾಜಿ ಅಧ್ಯಕ್ಷ ಯೋಗಾನಂದ, ರೋಟರಿ ಬೆಂಗಳೂರು ಪೀಣ್ಯ ಘಟಕದ ಅಧ್ಯಕ್ಷ ಶ್ರೀನಿವಾಸಮೂರ್ತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.