
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ (ಬಿಬಿಪಿ) ಮೂಲ ಸೌಕರ್ಯ ಅಭಿವೃದ್ಧಿಗೆ ಇನ್ಫೊಸಿಸ್ ಪ್ರತಿಷ್ಠಾನವು ₨ 1 ಕೋಟಿ ಮೀಸಲಿರಿಸಿದೆ.
‘ಜೀವ ವೈವಿಧ್ಯದ ತಾಣವಾಗಿರುವ ಮತ್ತು ನಗರಕ್ಕೆ ಸಮೀಪವಿರುವ ಬಿಬಿಪಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಈ ನಿಟ್ಟಿನಲ್ಲಿ ಇನ್ಫೊಸಿಸ್ ಪ್ರತಿಷ್ಠಾನದಿಂದ ಉದ್ಯಾನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗಿದೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಹೇಳಿದರು.
ಬಿಬಿಪಿಯಲ್ಲಿ ನೀರಿನ ಕೊರತೆ ನೀಗಿಸಲು ಇನ್ಫೊಸಿಸ್ ಪ್ರತಿಷ್ಠಾನದಿಂದ ಕೊರೆಯಲಾಗಿರುವ 5 ಕೊಳವೆ ಬಾವಿಗಳನ್ನು ಗುರುವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
‘ಬಿಬಿಪಿಗೆಂದೇ ಪ್ರಸಕ್ತ ಸಾಲಿನಲ್ಲಿ ಪ್ರತಿಷ್ಠಾನವು ₨ 1 ಕೋಟಿ ಮೀಸಲಿರಿಸಿದೆ. ಕೊಳವೆ ಬಾವಿ ಕಾಮಗಾರಿಗಾಗಿ ₨ 25 ಲಕ್ಷ ವೆಚ್ಚವಾಗಿದ್ದು, ನೀರಿನ ಸಂಗ್ರಹಣೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಓವರ್ ಹೆಡ್ ಟ್ಯಾಂಕ್‌ಗೆ ₨35 ಲಕ್ಷ ಖರ್ಚಾಗಲಿದೆ. ಉದ್ಯಾನಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಕುರಿತು ಪ್ರಸ್ತಾವ ಸಲ್ಲಿಸುವಂತೆ ಬಿಬಿಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.
ಬಿಬಿಪಿ ಉಪ ನಿರ್ದೇಶಕ ಬಿ.ಟಿ. ಮಹಮ್ಮದ್‌ಅಲಿ, ‘ಮೃಗಾಲಯದ ಆವರಣ, ಹುಲಿ ಪುನರ್ವಸತಿ ಕೇಂದ್ರ ಮತ್ತು ಸಫಾರಿಯ ಹೊರಭಾಗದಲ್ಲಿ 5 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇದರಿಂದ ಮೃಗಾಲಯದ ಪ್ರಾಣಿಗಳ ದೈನಂದಿನ ನಿರ್ವಹಣೆಗೆ, ಸಾರ್ವಜನಿಕರ ಕುಡಿಯುವ ನೀರಿಗೆ ಅನುಕೂಲವಾಗಲಿದೆ’ ಎಂದರು.
‘ದುಬಾರಿ ಶುಲ್ಕ ತೆತ್ತು ಸಫಾರಿಗೆ ಹೋಗಲಾಗದ ಕೆಳವರ್ಗದ ಪ್ರವಾಸಿಗರಿಗೂ ಅನುಕೂಲವಾಗುವಂತೆ ಮೃಗಾಲಯದ ಆವರಣದಲ್ಲೇ ಹುಲಿಯನ್ನು ವೀಕ್ಷಣೆಗೆ ಇಡುವ ಚಿಂತನೆಯಿದೆ. ಹುಲಿ ಬೋನಿನ ಕಟ್ಟಡಕ್ಕಾಗಿ ಇನ್ಫೊಸಿಸ್ ಪ್ರತಿಷ್ಠಾನಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು.
ಬಿಬಿಪಿಯ ಹುಲಿ ಪುನರ್ವಸತಿ ಕೇಂದ್ರದಲ್ಲಿರುವ 2 ತಿಂಗಳ ಹುಲಿ ಮರಿಗಳಿಗೆ ಅಧಿಕಾರಿಗಳ ಒತ್ತಾಯದ ಮೇರೆಗೆ ಕೃಷ್ಣ ಮತ್ತು ಅನುಷ್ಕಾ ಎಂದು ತಮ್ಮ ಮೊಮ್ಮಕ್ಕಳ ಹೆಸರಿಡುವಂತೆ ಸುಧಾ ಮೂರ್ತಿ ಅವರು ತಿಳಿಸಿದರು.
ದಿನಗೂಲಿ ನೌಕರರಿಗೆ ಗೌರವಧನ
ಬಿಬಿಪಿಯಲ್ಲಿ ದುಡಿಯುತ್ತಿರುವ 200ಕ್ಕೂ ಹೆಚ್ಚಿನ ದಿನಗೂಲಿ ನೌಕರರಿಗೆ ಪ್ರತಿಷ್ಠಾನದಿಂದ ವಾರ್ಷಿಕ ₨ 5 ಸಾವಿರ ಗೌರವಧನ ನೀಡಲು ₨ 10 ಲಕ್ಷ ಮತ್ತು 13 ಮಂದಿ ದಿನಗೂಲಿ ಮಾವುತರಿಗೆ ₨ 10 ಸಾವಿರ ವಿಶೇಷ ಗೌರವಧನ ನೀಡುತ್ತೇವೆ. ದಿನಗೂಲಿ ನೌಕರರ ವಿವರಗಳನ್ನು ನೀಡುವಂತೆ ಬಿಬಿಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾಧ್ಯವಾದರೆ ಪ್ರತೀ ವರ್ಷ ಗೌರವಧನ ನೀಡಲು ಪ್ರಯತ್ನಿಸುತ್ತೇವೆ ಎಂದು ಡಾ. ಸುಧಾ ಮೂರ್ತಿ ಹೇಳಿದರು.
ಆಂಬುಲೆನ್ಸ್‌ಗಾಗಿ ಬೇಡಿಕೆ
ಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಡಿಜಿಟಲ್ ಸ್ಕ್ಯಾನಿಂಗ್ ಮೊದಲಾದ ಆಧುನಿಕ ಉಪಕರಣಗಳನ್ನು ಒಳಗೊಂಡಿರುವ ಆಂಬುಲೆನ್ಸ್ ಒದಗಿಸುವಂತೆ ವೈದ್ಯಕೀಯ ಸಿಬ್ಬಂದಿ ಬೇಡಿಕೆ ಇಟ್ಟರು. ಸದ್ಯ ಉದ್ಯಾನದ ಕಚೇರಿ ಬಳಿಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಸಾಗಾಟದಲ್ಲೇ ಸಮಯ ವ್ಯರ್ಥವಾಗುವುದಲ್ಲದೆ, ಪ್ರಾಣಿಗಳಿಗೂ ಘಾಸಿಯಾಗುತ್ತದೆ. ಆಂಬುಲೆನ್ಸ್ ಇದ್ದಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಬಹುದು ಎಂದು ವಿವರಿಸಿದರು.
ಬನ್ನೇರುಘಟ್ಟಕ್ಕೆ ಬರಲಿವೆ ಹೇಸರಗತ್ತೆಗಳು
ದಕ್ಷಿಣ ಆಫ್ರಿಕಾದಿಂದ 4 ಹೇಸರಗತ್ತೆಗಳು (ಜೀಬ್ರಾ) ಬಿಬಿಪಿಗೆ ಬರಲಿವೆ. ಸಹಜ ಸಂತಾನೋತ್ಪತಿಗೆ ಅನುಕೂಲವಾಗುವಂತೆ 2 ಗಂಡು 2 ಹೆಣ್ಣು ಹೇಸರಗತ್ತೆಗಳನ್ನು ತರಿಸಲಾಗುತ್ತಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಸುರೇಶ್ ಹೇಳಿದರು.
4 ದಿನಗಳಲ್ಲಿ ಲೇಹ್‌ನಿಂದ ಮೃಗಾಲಯಕ್ಕೆ ಎರಡು ಡುಬ್ಬ ಹೊಂದಿರುವ ಒಂಟೆಗಳು ಬರಲಿವೆ. ಈ ಎಲ್ಲಾ ಪ್ರಾಣಿಗಳನ್ನು ಸರ್ಕಾರೇತರ ಸಂಸ್ಥೆಗಳು ಮೃಗಾಲಯಕ್ಕೆ ಕೊಡುಗೆಯಾಗಿ ನೀಡಿವೆ. ಬಿಬಿಪಿಗೆ ಎರಡು ಆಫ್ರಿಕನ್ ಆನೆಗಳನ್ನು ತರುವ ಚಿಂತನೆಯಿದೆ ಎಂದರು. ಈ ಹಿಂದೆ ಬಿಬಿಪಿಗೆ ಜಿರಾಫೆಗಳನ್ನು ತರುವ ಯೋಜನೆಯಿತ್ತು. ಮೈಸೂರಿನ ಮೃಗಾಲಯದಿಂದ ತರಲು ಉದ್ದೇಶಿಸಲಾಗಿದ್ದ ಜಿರಾಫೆ ಮರಿ ಈಗಾಗಲೇ 12 ಅಡಿ ಎತ್ತರ ಬೆಳೆದಿದೆ. ಬಹಳ ಸೂಕ್ಷ್ಮ ಜೀವಿಗಳಾದ ಅವುಗಳನ್ನು ಒತ್ತಾಯದಿಂದ ತರುವುದು ಸಾಧ್ಯವಿಲ್ಲ. ಆದ್ದರಿಂದ ಬಿಬಿಪಿಗೆ ಜಿರಾಫೆಗಳು ಬರುವುದು ತಡವಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.