ಬೆಂಗಳೂರು: ಬೆಳ್ಳಂದೂರು ಬಳಿಯ ಇಬ್ಬಲೂರು ಕೆರೆ ಒತ್ತುವರಿ ಮಾಡಿ ಕೊಂಡು ನಿರ್ಮಿಸಿದ್ದ ಎರಡು ವಾಣಿಜ್ಯ ಸಂಕೀರ್ಣಗಳು ಹಾಗೂ ಅಪಾರ್ಟ್ ಮೆಂಟ್‌ಗಳ ತಡೆಗೋ ಡೆಗಳನ್ನು ಮಂಗಳವಾರ ತೆರವುಗೊಳಿಸಿದ ಬೆಂಗಳೂರು ಜಿಲ್ಲಾಡಳಿತ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು 10 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ.
ಬೇಗೂರು ಹೋಬಳಿಯ ಸರ್ವೆ ನಂಬರ್ 36ರ ಇಬ್ಬಲೂರು ಕೆರೆಯು 18.5 ಎಕರೆ ವಿಸ್ತೀರ್ಣ ಹೊಂದಿದೆ. ಹರೀಶ್ ರೆಡ್ಡಿ ಹಾಗೂ ಜೋಸೆಫ್ ಎಂಬುವರು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದರು. ಅಲ್ಲದೆ ಕೆರೆಯ ಜಾಗದಲ್ಲಿ ಶೋಭಾ ಡೆವಲಪರ್ಸ್, ಸನ್‌ಸಿಟಿ ಡೆವಲಪರ್ಸ್ ಅಪಾರ್ಟ್‌ಮೆಂಟ್‌ಗಳ ತಡೆಗೋಡೆ ನಿರ್ಮಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸನ್‌ಸಿಟಿ ಡೆವಲಪರ್ಸ್ 5 ಗುಂಟೆ, ಶೋಭಾ ಡೆವಲಪರ್ಸ್ 4 ಗುಂಟೆ, ಹರೀಶ್ ರೆಡ್ಡಿ 8.5 ಗುಂಟೆ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೆ ಸ್ಮಶಾ ನಕ್ಕಾಗಿ 25 ಗುಂಟೆ ಜಾಗ ಒತ್ತುವರಿ ಯಾಗಿತ್ತು. ಕೆರೆಯ ಆವರಣದಲ್ಲಿ ಕೆಲವು ಗುಡಿಸಲುಗಳು ತಲೆಎತ್ತಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒತ್ತುವರಿ ಜಾಗದಲ್ಲಿ ಅಪಾರ್ಟ್ ಮೆಂಟ್‌ಗಳ ವಾಹನ ನಿಲುಗಡೆ ಸ್ಥಳ ಹಾಗೂ ಉದ್ಯಾನ ನಿರ್ಮಿಸಲಾಗಿತ್ತು. ಅಪಾರ್ಟ್‌ಮೆಂಟ್‌ನ ನಿವಾಸಿಗಳು, ಬಿಲ್ಡರ್‌ಗಳು ಮತ್ತು ಜಿಲ್ಲಾಡಳಿತದ ವಿರುದ್ಧ ನ್ಯಾಯಾಲಯದ ಮೆಟ್ಟಿ ಲೇರಲು ನಿರ್ಧರಿಸಿದ್ದಾರೆ.
ಕಾರ್ಯಾಚರಣೆ ತಡೆಗೆ ನಾಯಿ ಬಿಟ್ಟರು
‘ಬೆಳಿಗ್ಗೆ 6 ಗಂಟೆಗೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದ ಜೋಸೆಫ್ ನಾಲ್ಕು ಸಾಕು ನಾಯಿಗಳನ್ನು ನಮ್ಮ ಮೇಲೆ ಛೂ ಬಿಟ್ಟರು. ಬಿಬಿಎಂಪಿ ಸಿಬ್ಬಂದಿಯನ್ನು ಕರೆಸಿ ನಾಯಿಗಳನ್ನು ಹಿಡಿಸಿದ ಬಳಿಕ ಕಾರ್ಯಾಚರಣೆ ಮುಂದುವರಿಸಲಾಯಿತು’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.