ADVERTISEMENT

ಇ-ಆಡಳಿತದಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ: ಡಾ. ಕಲಾಂ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ದೇಶದೆಲ್ಲೆಡೆ ಇ-ಆಡಳಿತವನ್ನು ಜಾರಿಗೆ ತರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ. ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಪಾರದರ್ಶಕತೆ ತರಲು ಇದು ಸಹಕಾರಿ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ತಿಳಿಸಿದರು.

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಪಿಎಂಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಯೋಜನಾ ನಿರ್ವಹಣೆ ರಾಷ್ಟ್ರೀಯ ಸಮ್ಮೇಳನ~ವನ್ನು ಉದ್ಘಾಟಿಸಿದ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

`ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಶ್ರೇಷ್ಠ ನಾಗರಿಕರ ಅವಶ್ಯಕತೆ ಇದೆ. ತಂದೆ ಭ್ರಷ್ಟನಾಗಿದ್ದರೆ ಮಕ್ಕಳು ಅದನ್ನು ತಿದ್ದಬೇಕು. ಮಕ್ಕಳು ಭ್ರಷ್ಟರಾಗಿದ್ದರೆ ಪೋಷಕರು ತಿಳಿ ಹೇಳಬೇಕು. ಮೊದಲು ಕುಟುಂಬದಿಂದಲೇ ಈ ಪ್ರಕ್ರಿಯೆ ಆರಂಭವಾಗಬೇಕು~ ಎಂದು ಅಭಿಪ್ರಾಯಪಟ್ಟರು.

`ಕರ್ತವ್ಯ ನಿರ್ವಹಿಸುವಾಗ ಪ್ರತಿಯೊಬ್ಬರೂ ತಾನು ಭ್ರಷ್ಟನಲ್ಲ ಎಂಬ ಛಾಪು ಮೂಡಿಸಬೇಕು. ಬಡ್ತಿ ಮತ್ತಿತರ ಸೌಲಭ್ಯಗಳು ದೊರೆಯದಿದ್ದರೂ ಪ್ರಾಮಾಣಿಕತೆಯನ್ನು ಕೈ ಬಿಡಬಾರದು. ನೀವು ನಿಮ್ಮದೇ ನಿಲುವಿಗೆ ಬದ್ಧರಾಗಿ ನಡೆದರೆ ಒಂದಲ್ಲಾ ಒಂದು ದಿನ ಪ್ರತಿಫಲ ಸಿಗುತ್ತದೆ~ ಎಂದು ಹೇಳಿದರು.

`ಯಾವುದೇ ಕ್ಷೇತ್ರದಲ್ಲಿ ಉತ್ತಮ ನಾಯಕರಾಗಲು ದೂರದರ್ಶಿ ಕಾರ್ಯ ನಿರ್ವಹಣೆ ಮುಖ್ಯ. ಹಾಗೆಯೇ ತಮ್ಮ ಗುರಿಯನ್ನು ಕಾರ್ಯ ರೂಪಕ್ಕಿಳಿಸುವುದು, ಯಶಸ್ಸು ಹಾಗೂ ವೈಫಲ್ಯತೆಯನ್ನು ಎದೆಗುಂದದೆ ನಿಭಾಯಿಸುವುದು, ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವುದು, ಉದಾತ್ತತೆಯಿಂದ ವರ್ತಿಸುವುದು, ಪಾರದರ್ಶಕತೆ ಕಾಪಾಡಿಕೊಳ್ಳುವುದು ಹಾಗೂ ನಿಯತ್ತಿನಿಂದ ಕೆಲಸ ಮಾಡುವುದು ಕೂಡ ಮುಖ್ಯ~ ಎಂದರು.

`ದೇಶದಲ್ಲಿರುವ 60 ಕೋಟಿ ಯುವಕರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ವಿಷನ್ 2020 ಗುರಿ ಮುಟ್ಟುವುದು ಕಷ್ಟವೇನಲ್ಲ. ಆದರೆ ಇದನ್ನು ಸಾಧಿಸುವ ಛಲ ಮುಖ್ಯ. ಇದೇ ವೇಳೆ ದೇಶದ ಪ್ರತಿ ಹಳ್ಳಿಗೂ ಸುಸ್ಥಿರ ಅಭಿವೃದ್ಧಿ ತಲುಪುವಂತೆ ನೋಡಿಕೊಳ್ಳಬೇಕು~ ಎಂದು ಅವರು ತಿಳಿಸಿದರು.

ಪಿಎಂಐ ಮಂಡಳಿ ನಿರ್ದೇಶಕ ರಿಕಾರ್ಡೊ ಟ್ರಿಯಾನ, ಅಧ್ಯಕ್ಷ ಮಾರ್ಕ್ ಲ್ಯಾಂಗ್ಲಿ, ಮೈಕ್ರೊಸಾಫ್ಟ್ ಇಂಡಿಯಾ ಮಾಹಿತಿ ಉದ್ಯೋಗಿ ವಿಭಾಗದ ನಿರ್ದೇಶಕ ಸಂಜಯ್ ಮಂಚಂಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.