ಬೆಂಗಳೂರು: ಪದವಿ ಪ್ರವೇಶಕ್ಕಾಗಿ ನಗರದ ಕಾಲೇಜುಗಳಲ್ಲಿ ಭರಪೂರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ವಾರ ಕಳೆದರೂ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸರತಿ ಸಾಲು ಕುಗ್ಗಿಲ್ಲ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಸಲ ದಾಖಲೆಯ ಫಲಿತಾಂಶ ಬಂದಿದೆ. ಮಾರ್ಚ್ನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದವರಲ್ಲಿ ಶೇಕಡ 60.47ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಹತ್ತು ವರ್ಷಗಳಲ್ಲಿ ಮೊದಲ ಬಾರಿ ಉತ್ತೀರ್ಣ ಪ್ರಮಾಣ ಶೇ 60ರ ಗಡಿ ದಾಟಿತ್ತು. ಇದರಿಂದಾಗಿ ಈ ವರ್ಷ ಪದವಿ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವವವರ ಸಂಖ್ಯೆ ಹೆಚ್ಚಾಗಿದೆ.
ಬಿಎಸ್ಸಿಗೆ ಬೇಡಿಕೆಯೇ ಇಲ್ಲ: ಈ ಸಲ ಉತ್ತಮ ಫಲಿತಾಂಶ ಬಂದಿರುವುದರಿಂದ ಅರ್ಜಿಗಳ ಸಂಖ್ಯೆಯಲ್ಲೂ ಹೆಚ್ಚಳ ಆಗಿದೆ. ಇದೇ 19ರ ವರೆಗೆ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮೊದಲ ಪಟ್ಟಿಯನ್ನು ಇದೇ 21ರಂದು ಪ್ರಕಟಿಸಲಾಗುವುದು’ ಎಂದು ಜಯನಗರ ವಿಜಯ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ್ ಬಾಬು ಹೇಳುತ್ತಾರೆ.
‘ಕಳೆದ ಸಲವೂ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇತ್ತು. ವಾಣಿಜ್ಯ ವಿಭಾಗದಲ್ಲಿ ಕಟ್ ಆಫ್ ಪರ್ಸಂಟೇಜ್ (ಪ್ರವೇಶಕ್ಕೆ ಕನಿಷ್ಠ ಶೇಕಡಾವಾರು ಅಂಕ) ಶೇ 80 ಆಗಿತ್ತು. ಈ ಸಲ ಶೇ 85 ಆಗುವ ಸಾಧ್ಯತೆ ಇದೆ. ಕಾಲೇಜಿನಲ್ಲಿ ಬಿ.ಕಾಂ ಪದವಿಗೆ 300 ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇದೆ. ಈ ವರೆಗೆ 1,500ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಆದರೆ ಬಿ.ಎಸ್ಸಿಗೆ ಬೇಡಿಕೆಯೇ ಇಲ್ಲ. ಬಿ.ಎಸ್ಸಿಗೆ ನಾವೇ ಕರೆದು ಅರ್ಜಿ ಕೊಟ್ಟರೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.
ಉದ್ಯೋಗಾವಕಾಶ ಜಾಸ್ತಿ: ‘ಕಾಲೇಜಿನಲ್ಲಿ ಬಿಕಾಂ ಪದವಿಗೆ ಪ್ರವೇಶ ಕೋರಿ ಈ ವರೆಗೆ 500 ಅರ್ಜಿಗಳು ಸಲ್ಲಿಕೆ ಆಗಿವೆ. ಕಳೆದ ವರ್ಷ ಶೇ 60ಕ್ಕಿಂತ ಅಧಿಕ ಅಂಕ ಪಡೆದವರಿಗೆ ಬಿ.ಕಾಂಗೆ ಪ್ರವೇಶ ನೀಡಲಾಗಿತ್ತು. ಈ ಸಲ ಶೇ 65ಕ್ಕೆ ಹೆಚ್ಚಲಿದೆ. ವಾಣಿಜ್ಯ ಪದವಿಗಳಿಗೆ ಸೇರಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ, ಸೇವಾ ವಲಯ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಬಿ.ಕಾಂ ಪದವಿ ಪಡೆದವರಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಸುರಾನ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಶ್ರೀಕಂಠ ವಿಶ್ಲೇಷಿಸುತ್ತಾರೆ.
‘ಬಳಿಕ ಬೇಡಿಕೆ ಇರುವುದು ಬಿಸಿಎ ಕೋರ್ಸ್‌ಗೆ. ವಿಜ್ಞಾನ ವಿಭಾಗಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುಗ್ಗುತ್ತಿದೆ. ಬಿ.ಎಸ್ಸಿ ಮಾಡಿದ ಬಳಿಕ ಎಂ.ಎಸ್ಸಿ ಮಾಡಿದರೆ ಮಾತ್ರ ಉತ್ತಮ ಉದ್ಯೋಗ ದೊರಕುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ಪದವಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಶೇ 45 ಅಂಕ ಪಡೆದವರಿಗೂ ಕಾಲೇಜಿನಲ್ಲಿ ಬಿ.ಎಸ್ಸಿಗೆ ಪ್ರವೇಶ ನೀಡಲಾಗುವುದು’ ಎಂದು ಅವರು ತಿಳಿಸಿದರು.
ಬಿಬಿಎ ಬೇಡಿಕೆ: ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಹಾಗೂ ಬಿಬಿಎ ಪದವಿಗೆ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆ ಆಗಿವೆ. ವಿ.ವಿಯಲ್ಲಿ ಬಿಕಾಂ ಪದವಿಗೆ ಶೇ 86, ಬಿ.ಎ ಪದವಿಗೆ ಶೇ 65, ಬಿ.ಎಸ್ಸಿಗೆ ಶೇ 65, ಬಿ.ಸಿ.ಎ ಗೆ ಶೇ 75, ಬಿ.ಬಿ.ಎ ಪದವಿಗೆ ಶೇ 88 ಕಟ್ ಆಫ್ ಪರ್ಸಂಟೇಜ್ ನಿಗದಿಪಡಿಸಲಾಗಿದೆ. ಅರ್ಜಿ ವಿತರಣೆ ಪ್ರಕ್ರಿಯೆ ಇನ್ನೂ ಒಂದು ವಾರ ಕಾಲ ಮುಂದುವರಿಯಲಿದೆ.
ಕಾಲೇಜಿನಲ್ಲಿ ಬಿ.ಕಾಂ, ಬಿ.ಬಿ.ಎ, ಬಿ.ಎ, ಬಿ.ಎಸ್ಸಿ, ಬಿ.ಟೆಕ್–ಮೆಕಾನಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್, ಬಿಎಸ್ಸಿ ಆನಿಮೇಶನ್ ಪದವಿಗಳಿಗೆ ಅಧಿಕ ಬೇಡಿಕೆ ಇದೆ. ವಿ.ವಿಯು ಔದ್ಯೋಗಿಕ ಹಾಗೂ ವಾಣಿಜ್ಯ ಉದ್ಯಮದ ಅಗತ್ಯಗಳನ್ನು ಪೂರೈಸುವಂತಹ ಫೋರೆನ್ಸಿಕ್ ಸೈನ್ಸ್, ಒಳಾಂಗಣ ವಿನ್ಯಾಸ, ಮನೋವಿಜ್ಞಾನ, ಕ್ಲೌಡ್ ತಂತ್ರಜ್ಞಾನ ಮತ್ತಿತರ ಅಂತರವಿಭಾಗೀಯ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರು ವಿವರ ನೀಡಿದರು.
‘ಜೈನ್ ಕಾಲೇಜಿನಲ್ಲಿ ಕಳೆದ ಬಾರಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಎಬಿಎಂಸ್ ಸಂಯೋಜನೆಗಳು ಪ್ರಾಬಲ್ಯ ಮೆರೆದಿದ್ದವು. ಈ ಬಾರಿ ಸಹ ಇದೇ ಸಂಯೋಜನೆಗಳಿಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಒಲವು ವ್ಯಕ್ತವಾಗಿದೆ’ ಎಂದು ಅವರು ಹೇಳುತ್ತಾರೆ.
ಸಂಪರ್ಕಕ್ಕೆ:
ಜಯನಗರ ವಿಜಯ ಕಾಲೇಜು: 080- 26933220
ಜೈನ್ ವಿಶ್ವವಿದ್ಯಾಲಯ: 080 43431000
ಸುರಾನ ಪದವಿ ಕಾಲೇಜು: 080-22446141
ಎಲ್‌ಎಲ್‌ಬಿ ಕೋರ್ಸ್‌ಗಳಿಗಾಗಿ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು 2014–15 ನೇ ಶೈಕ್ಷಣಿಕ ವರ್ಷದಲ್ಲಿ 5 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ದ್ವಿತೀಯ ಪಿಯುಸಿಯಲ್ಲಿ ಶೇ 45 ರಷ್ಟು ಅಂಕಗಳನ್ನು ಗಳಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಹಣಕಾಸು ಅಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯ ಇವರ ಹೆಸರಿನಲ್ಲಿ ಡಿಡಿ ಪಡೆದು ಜೂನ್ 10 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: www.bangaloreuniversity.ac ಅಥವಾ ಯೂನಿವರ್ಸಿಟಿ ಲಾ ಕಾಲೇಜು, ಜ್ಞಾನಭಾರತಿ, ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.