ADVERTISEMENT

ಉತ್ತಮ ಮೌಲ್ಯ ಅಳವಡಿಸಿಕೊಳ್ಳಲು ಮಕ್ಕಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಯಲಹಂಕ:  ಮಕ್ಕಳು ಕೇವಲ ವಿದ್ಯಾವಂತರಾದರೆ ಸಾಲದು. ಜತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು  ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಕೊಡಿಗೇಹಳ್ಳಿಯ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮಾಜ ಸೇವಕ ಕೆ.ಎನ್.ಮಂಜುನಾಥ್ ವತಿಯಿಂದ ಉಚಿತವಾಗಿ ನೀಡಲಾದ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಬಹಳ ಮಂದಿಗೆ ದಾನ ಮಾಡಬೇಕು ಎಂಬ ಮನಸ್ಸಿರುವುದಿಲ್ಲ. ಆದರೆ ಕೆಲದಾನಿಗಳು ಐದು ವರ್ಷಗಳಿಂದ ಈ ಶಾಲೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ಸಮಾಜ ಸೇವಕ ಕೆ.ಎನ್.ಮಂಜುನಾಥ್ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತಿದೆ. ಮುಂದೆಯೂ ಈ ಕಾರ್ಯವನ್ನು ಮುಂದುವರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಅಳವಡಿಸಿರುವ ಆಟಿಕೆಗಳನ್ನು ಮಕ್ಕಳ ಬಳಕೆಗೆ ಮುಕ್ತಗೊಳಿಸಲಾಯಿತು. ಜಿ.ಪಂ.ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ನಗರಸಭಾ ಅಧ್ಯಕ್ಷರಾದ ಎಂ.ಹನುಮಂತೇಗೌಡ, ಶ್ರೀನಿವಾಸರಾಜು, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆನಂದ್, ಕಾಂಗ್ರೆಸ್ ಮುಖಂಡರಾದ ವಿ.ಹರಿ, ರಾಜು ಇತರರು ಉಪಸ್ಥಿತರಿದ್ದರು.

ಗುದ್ದಲಿಪೂಜೆ: `ನರ್ಮ್~ ಹಾಗೂ ವಿಶ್ವಬ್ಯಾಂಕ್ ನೆರವಿನಿಂದ ಬೆಂಗಳೂರು ಜಲಮಂಡಳಿಯು ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ 55.73 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು. ಬಿಬಿಎಂಪಿ ಸದಸ್ಯ ಅಶ್ವಥನಾರಾಯಣಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.