ADVERTISEMENT

ಉತ್ತರಾದಿ ಮಠದಲ್ಲಿ ಮುದ್ರಾಧಾರಣೆ ಪುಳಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:46 IST
Last Updated 20 ಜುಲೈ 2013, 19:46 IST
ಬಸವನಗುಡಿಯ ಉತ್ತರಾದಿ ಮಠದಲ್ಲಿ ಶುಕ್ರವಾರ ನಡೆದ ತಪ್ತ ಮುದ್ರಾಧಾರಣೆಯ ಸಂದರ್ಭ ಮುದ್ರೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ನೂರಾರು ಭಕ್ತರು
ಬಸವನಗುಡಿಯ ಉತ್ತರಾದಿ ಮಠದಲ್ಲಿ ಶುಕ್ರವಾರ ನಡೆದ ತಪ್ತ ಮುದ್ರಾಧಾರಣೆಯ ಸಂದರ್ಭ ಮುದ್ರೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ನೂರಾರು ಭಕ್ತರು   

ಬೆಂಗಳೂರು: ಆಷಾಢ ತಿಂಗಳ ಮೊದಲ ಏಕಾದಶಿಯ ದಿನವಾದ ಶುಕ್ರವಾರ ಬಸವನಗುಡಿಯ ಉತ್ತರಾದಿ ಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು. ಸುಮಾರು 30,000 ಭಕ್ತರು ಮುದ್ರಾಧಾರಣೆ ಮಾಡಿಸಿಕೊಂಡರು.

ಬೆಳಿಗ್ಗೆ 5.30ಕ್ಕೆ ಆರಂಭವಾದ ಮುದ್ರಾಧಾರಣೆ ಶನಿವಾರ ಬೆಳಿಗ್ಗೆವರೆಗೂ ಮುಂದುವರಿಯಿತು. ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಭಕ್ತರಿಗೆ ಮುದ್ರೆ ಹಾಕಿದರು. ಮಳೆಯ ನಡುವೆಯೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರದ್ಧಾ ಭಕ್ತಿಯಿಂದ ಮುದ್ರೆ ಹಾಕಿಸಿಕೊಂಡರು.

`ಮುದ್ರಾಧಾರಣೆ ಮಾಧ್ವರಲ್ಲಿ ವಿಶೇಷ ಸಂಪ್ರದಾಯ. ನಮ್ಮ ದೇಹ ಭಗವಂತನ ಅಧೀನ ಎಂಬ ನಂಬಿಕೆ ಇದೆ. ಹೀಗಾಗಿ ಆಷಾಢ ತಿಂಗಳ ಮೊದಲ ಏಕಾದಶಿಯಂದು ದೇಹದಲ್ಲಿ ಶಂಖ, ಚಕ್ರದ ಮುದ್ರೆಗಳನ್ನು ಹಾಕಿಸಿಕೊಳ್ಳಲಾಗುತ್ತದೆ' ಎಂದು ಮಠದ ವ್ಯವಸ್ಥಾಪಕ ಭೀಮಸೇನ ಆಚಾರ್ಯ `ಪ್ರಜಾವಾಣಿ'ಗೆ ತಿಳಿಸಿದರು.

`ಮಾಧ್ವರಲ್ಲಿ 24 ಮಠಗಳಿವೆ. ಈ ಪೈಕಿ ಶೇ 70 ಮಂದಿ ಉತ್ತರಾದಿ ಮಠದ ಶಿಷ್ಯರು. ಭಕ್ತರಿಗೆ ಅನುವಾಗಲು ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.

ರಾತ್ರಿ ವರೆಗೆ 30,000 ಮಂದಿ ಮುದ್ರೆ ಹಾಕಿಸಿಕೊಂಡಿದ್ದಾರೆ. ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಬಳಿಕ ಮುದ್ರಾಧಾರಣೆಗೆ ಅತ್ಯಧಿಕ ಸಂಖ್ಯೆಯ ಭಕ್ತರು ಸೇರುತ್ತಾರೆ' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.