ADVERTISEMENT

ಉದ್ಘಾಟನೆ:ದಿನಾಂಕ ಸರ್ಕಾರದ ನಿರ್ಧಾರಕ್ಕೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 19:05 IST
Last Updated 19 ಏಪ್ರಿಲ್ 2011, 19:05 IST
ಉದ್ಘಾಟನೆ:ದಿನಾಂಕ ಸರ್ಕಾರದ ನಿರ್ಧಾರಕ್ಕೆ
ಉದ್ಘಾಟನೆ:ದಿನಾಂಕ ಸರ್ಕಾರದ ನಿರ್ಧಾರಕ್ಕೆ   

ಬೆಂಗಳೂರು: ‘ನಮ್ಮ ಮೆಟ್ರೊ’ದ ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ರೈಲು ಸಂಚಾರದ ಉದ್ಘಾಟನೆಯ ದಿನಾಂಕದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ತಿಳಿಸಿದರು.

ವಿದ್ಯಮಾನ ವೇದಿಕೆ ಮಂಗಳವಾರ ಏರ್ಪಡಿಸಿದ್ದ ‘ಮೆಟ್ರೊ ರೈಲು: ಕನಸು ಮತ್ತು ನನಸು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನ ಪಾಲುದಾರಿಕೆ ಹೊಂದಿವೆ. ಮುಖ್ಯಮಂತ್ರಿ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವರು ಮೆಟ್ರೊ ರೈಲಿನ ಉದ್ಘಾಟನೆಯ ದಿನವನ್ನು ನಿಗದಿ ಮಾಡಲಿದ್ದಾರೆ’ ಎಂದು ಅವರು ಹೇಳಿದರು.

‘ಮೆಟ್ರೊ ರೈಲಿನ ಸಾರ್ವಜನಿಕ ಸಂಚಾರ ಆರಂಭಿಸುವ ಮುನ್ನ ಕೇಂದ್ರ ಮೆಟ್ರೊ ಕಾಯ್ದೆಯ ಪ್ರಕಾರ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ರೈಲ್ವೆ ಮಂಡಳಿಯ ಸೂಚನೆಯಂತೆ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆಯು  (ಆರ್‌ಡಿಎಸ್‌ಒ) ಪರೀಕ್ಷಾರ್ಥ ಸಂಚಾರ ನಡೆಸಿ ವರದಿ ನೀಡಲಿದೆ. ಈ ಪ್ರಕ್ರಿಯೆಗೆ 10ರಿಂದ 15 ದಿನಗಳ ಕಾಲಾವಕಾಶ ಬೇಕಾಗಲಿದೆ. ಸುರಕ್ಷತಾ ಪ್ರಮಾಣ ಪತ್ರ ಪಡೆದ ಮೇಲೆ ಅದನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು.

‘ಯೋಜನೆ ಪ್ರಕಾರ ನಮ್ಮ ಮೆಟ್ರೊ ರೈಲಿನ ಗರಿಷ್ಠ ವೇಗ ಗಂಟೆಗೆ 80 ಕಿ.ಮೀ. ಆದರೆ 90 ಕಿ.ಮೀ. ವೇಗದಲ್ಲಿ ರೈಲಿನ ಪರೀಕ್ಷಾರ್ಥ ಓಡಾಟ ಯಶಸ್ವಿಯಾಗಿ ಸಾಗಿದೆ. ತಿರುವುಗಳಲ್ಲಿಯೂ ಗಂಟೆಗೆ 55 ಕಿ.ಮೀ. ವೇಗದಲ್ಲಿ (ನಿಗದಿತ ವೇಗ ಗಂಟೆಗೆ 45 ಕಿ.ಮೀ.) ರೈಲನ್ನು ಓಡಿಸುತ್ತಿದ್ದೇವೆ. ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ರೈಲ್ವೆ ಸುರಕ್ಷತಾ ಆಯುಕ್ತರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ವಿಶ್ವಾಸ ಇದೆ’ ಎಂದು ಅವರು ತಿಳಿಸಿದರು.

‘ನಮ್ಮ ಮೆಟ್ರೊದ 45 ರೈಲು ಗಾಡಿಗಳಿಗೆ ಬೇಕಾಗುವ 135 ಬೋಗಿಗಳನ್ನು ಬಿಇಎಂಎಲ್‌ನವರು ತಯಾರಿಸುತ್ತಿದ್ದಾರೆ. ಜುಲೈ ತಿಂಗಳಿಂದ ಬಿಇಎಂಎಲ್‌ನವರು ಬೋಗಿಗಳನ್ನು ಹಸ್ತಾಂತರ ಮಾಡಲಿದ್ದಾರೆ’ ಎಂದು ಅವರು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆಟ್ರೊ ಕಾಮಗಾರಿಯಲ್ಲಿ ಫಿಲ್ಟರ್ ಮರಳು ಬಳಕೆಯಾಗುತ್ತಿದೆ ಎಂದು ಸಭಿಕರೊಬ್ಬರು ಆರೋಪಿಸಿದ್ದಕ್ಕೆ ಕೋಪಗೊಂಡ ಶಿವಶೈಲಂ, ‘ನೀವು ಆರೋಪ ಮಾಡುವುದಾದರೆ ಒಂದು ವಾರದೊಳಗೆ ಲೋಕಾಯುಕ್ತರಿಗೆ ದೂರು ನೀಡಿ’ ಎಂದು ಅವರು ತಾಕೀತು ಮಾಡಿದರು.

‘ಗುಣಮಟ್ಟ ಪಾಲನೆಯಲ್ಲಿ ನಮ್ಮ ಮೆಟ್ರೊ ಮೊದಲ ಸ್ಥಾನದಲ್ಲಿದೆ. ಮೆಟ್ರೊ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ನಿರ್ಮಾಣ ಹಂತದಲ್ಲಿ ಸರಿ ಇಲ್ಲವೆಂದು ಕಂಡು ಬಂದರೆ ಅದನ್ನು ಕೆಡವಿ ಹಾಕಿ, ಪುನರ್ ನಿರ್ಮಾಣ ಮಾಡುತ್ತೇವೆಯೇ ಹೊರತು ಮುಚ್ಚಿಡುವುದಿಲ್ಲ’ ಎಂದು ಹೇಳಿದರು.

‘ನಾವು ಅಳವಡಿಸಿಕೊಂಡಿರುವ ತಾಂತ್ರಿಕತೆಯಿಂದಾಗಿ ಶೇಕಡಾ 30ರಷ್ಟು ವಿದ್ಯುತ್ ಉಳಿತಾಯ ಆಗಲಿದೆ. ಪ್ರತ್ಯೇಕ ಮಾರ್ಗದಿಂದ ವಿದ್ಯುತ್ ಪೂರೈಕೆ ಆಗುವುದರಿಂದ ವಿದ್ಯುತ್ ವ್ಯತ್ಯಯದಿಂದ ಮೆಟ್ರೊ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗದು’ ಎಂದು ಎನ್. ಶಿವಶೈಲಂ ಅವರು ಹೇಳಿದರು.

‘ಮೆಟ್ರೊ ಕಾಮಗಾರಿ ನಡೆದಿರುವ ಮಾಗಡಿ ರಸ್ತೆಯು ಹೆಚ್ಚು ಹಾಳಾಗಿದೆ ಮತ್ತು ದೂಳಿನಿಂದ ತುಂಬಿ ಹೋಗಿದೆ’ ಎಂದು ಒಪ್ಪಿಕೊಂಡ ಶಿವಶೈಲಂ, ‘ಮಾಗಡಿ ರಸ್ತೆ ವಿಸ್ತರಣೆ ಆದ ಮೇಲೆ ಜಲ ಮಂಡಳಿಯ ಕೊಳವೆ ಮಾರ್ಗ ಪದೇ ಪದೇ ಒಡೆದು ಹೋಗುತ್ತಿದೆ. ಅದನ್ನು ಜಲಮಂಡಳಿ ಬದಲಾಯಿಸಲಿದೆ. ಅದಕ್ಕಾಗಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ನಿಲ್ಲಿಸಲಾಗುವುದು. ಬಳಿಕ 62 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು’ ಎಂದರು.

2ನೇ ಹಂತ: 18,000 ಕೋಟಿ ರೂಪಾಯಿ ಅಂದಾಜು ವೆಚ್ಚದ ‘ನಮ್ಮ ಮೆಟ್ರೊ’ದ ಎರಡನೇ ಹಂತದ ಯೋಜನೆಗೆ ಸಾಲ ನೀಡಲು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಮುಂದೆ ಬಂದಿದೆ. 44 ಕಿ.ಮೀ ಉದ್ದದ ಮೊದಲ ಹಂತ ಹಾಗೂ  60 ಕಿ.ಮೀ. ಉದ್ದದ ಎರಡನೇ ಹಂತ ಸಂಪೂರ್ಣಗೊಂಡ ಮೇಲೆ ಬೆಂಗಳೂರಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಯನ್ನು ಒಂದು ಗಂಟೆಯಲ್ಲಿ ತಲುಪಬಹುದು ಎಂದು ಅವರು ಹೇಳಿದರು.

‘ಸ್ವಸ್ತಿಕ್ ವೃತ್ತದಿಂದ ಪೀಣ್ಯದವರೆಗಿನ ರೀಚ್- 3ರ ಮಾರ್ಗದಲ್ಲಿ 2012ರ ಮಾರ್ಚ್ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುವುದು. ಮೊದಲ ಹಂತದ ಎಲ್ಲ ಕಾಮಗಾರಿಗಳು 2013ರ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳಲಿವೆ’ ಎಂದು ಅವರು ನುಡಿದರು.

ವೇದಿಕೆಯ ಪೋಷಕ ಪಿ.ಜಿ.ಆರ್.ಸಿಂಧ್ಯ, ವೇದಿಕೆ ಅಧ್ಯಕ್ಷ ರಾಜಾ ಶೈಲೇಶಚಂದ್ರ ಗುಪ್ತ, ಪ್ರಧಾನ ಕಾರ್ಯದರ್ಶಿ ಅಂಜನ್ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.