ADVERTISEMENT

ಎಂಎಲ್‌ಸಿ ಸೋಗಿನಲ್ಲಿ 187 ತಾಳಿ ದೋಚಿದ!

ಸಾಮೂಹಿಕ ವಿವಾಹ ಕಾರ್ಯಕ್ರಮದ ಹೆಸರಿನಲ್ಲಿ ವಂಚನೆ * ಇಬ್ಬರ ಬಂಧನ, ಮತ್ತಿಬ್ಬರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ಎಲ್‌.ಸೋಮಣ್ಣ
ಎಲ್‌.ಸೋಮಣ್ಣ   

ಬೆಂಗಳೂರು: ಸಾಮೂಹಿಕ ವಿವಾಹ ಏರ್ಪಡಿಸಿರುವ ನೆಪದಲ್ಲಿ ವ್ಯಾಪಾರಿಯೊಬ್ಬರಿಂದ 187 ಚಿನ್ನದ ತಾಳಿಗಳನ್ನು ‍ಪಡೆದು ವಂಚಿಸಿದ್ದ ಎಲ್‌.ಸೋಮಣ್ಣ (39) ಅಲಿಯಾಸ್ ಎಂಎಲ್‌ಸಿ ಎಂಬಾತ ಬಸವೇಶ್ವರನಗರ ಪೊಲೀಸರ ಅತಿಥಿಯಾಗಿದ್ದಾನೆ.

ಚಿತ್ರದುರ್ಗ ಜಿಲ್ಲೆಯ ಸೋಮಣ್ಣ, ತಾನು ವಿಧಾನ ಪರಿಷತ್ ಸದಸ್ಯ ಎಂದು ಸುಳ್ಳು ಹೇಳಿ ಹಲವರಿಗೆ ವಂಚಿಸಿದ್ದಾನೆ. ಈತನ ವಿರುದ್ಧ ಕೊಡಿಗೇಹಳ್ಳಿ, ವೈಯ್ಯಾಲಿಕಾವಲ್ ಹಾಗೂ ಮೈಸೂರಿನ ನಜರಾಬಾದ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ. ಸೋಮಣ್ಣನಿಗೆ ನೆರವಾದ ತಪ್ಪಿಗೆ ಆತನ ಸಹಚರ ಅಂಥೋನಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮಣ್ಣ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಸಹಕಾರನಗರದ ‘ಗೋದ್ರೇಜ್’ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ಸಾಮೂಹಿಕ ವಿವಾಹದ ನೆಪದಲ್ಲಿ ಚಿನ್ನದ ತಾಳಿಗಳು ಹಾಗೂ ಬಿಸ್ಕತ್‌ಗಳನ್ನು ಪಡೆದಿರುವುದು ಮಾತ್ರವಲ್ಲದೆ, ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ್ದಾನೆ.

ADVERTISEMENT

ಆರೋಪಿಗಳು ಸಾಣೆಗೊರವನಹಳ್ಳಿಯ ಬಟ್ಟೆ ವ್ಯಾಪಾರಿ ಸೂರಜ್ ಎಂಬುವರಿಂದ 2.5 ಕೆ.ಜಿ ಚಿನ್ನ ಪಡೆದು ವಂಚಿಸಿದ್ದರು. ಈ ಸಂಬಂಧ ಫೆ.21ರಂದು ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

‘ಕೃತ್ಯದ ಬಳಿಕ ಫ್ಲ್ಯಾಟ್ ಖಾಲಿ ಮಾಡಿಕೊಂಡು ಪರಾರಿಯಾಗಿದ್ದ ಸೋಮಣ್ಣನನ್ನು ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಭಾನುವಾರ ರಾತ್ರಿ ವಶಕ್ಕೆ ಪಡೆದೆವು. ಆತ ನೀಡಿದ ಸುಳಿವು ಆಧರಿಸಿ ಸಹಚರ ಅಂಥೋನಿಯನ್ನು ಸೋಮವಾರ ಬಂಧಿಸಿದೆವು. ಕೃತ್ಯದಲ್ಲಿ ಭಾಗಿಯಾಗಿರುವ ರೇಣುಕೇಶ್ ಹಾಗೂ ಗಂಗಮ್ಮ ಸಿಗಬೇಕಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಂಚಿಸಿದ್ದು ಹೀಗೆ?
‘2017ರ ಜುಲೈ 15ರಂದು ಕರೆ ಮಾಡಿದ್ದ ರೇಣುಕೇಶ್ ಎಂಬಾತ, ‘ನಾನು ಎಂಎಲ್‌ಸಿ ಎಲ್‌.ಸೋಮಣ್ಣ ಅವರ ಆಪ್ತ. ಮುಂದಿನ ವಾರ ಸಾಹೇಬರ ಹುಟ್ಟುಹಬ್ಬವಿದೆ. ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಹೊಸ ಬಟ್ಟೆಗಳನ್ನು ಖರೀದಿಸಬೇಕು’ ಎಂದಿದ್ದ. ಅದಕ್ಕೆ ನಾನು ಅಂಗಡಿಗೆ ಬರುವಂತೆ ಹೇಳಿದ್ದೆ. ಜುಲೈ 18ರಂದು ಇಬ್ಬರು ಮಕ್ಕಳ ಜತೆ ಬಂದ ಮಹಿಳೆಯೊಬ್ಬರು, ತಾನು ಸೋಮಣ್ಣನ ಪತ್ನಿ ಗಂಗಮ್ಮ ಎಂದು ಹೇಳಿ ₹ 30 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದರು. ಅದಕ್ಕೆ ಹಣವನ್ನೂ ಕೊಟ್ಟು ಹೋಗಿದ್ದರು’ ಎಂದು ಫಿರ್ಯಾದಿ ಸೂರಜ್ ವಿವರಿಸಿದರು.

‘ವಾರದ ಬಳಿಕ ಅಂಗಡಿಗೆ ಬಂದು ‘ನಾನೇ ಎಂಎಲ್‌ಸಿ ಸೋಮಣ್ಣ’ ಎಂದು ಪರಿಚಿಯಿಸಿಕೊಂಡ ವ್ಯಕ್ತಿಯೊಬ್ಬ, ‘ನಮ್ಮೊದೊಂದು ಟ್ರಸ್ಟ್ ಇದೆ. ಅಲ್ಲಿ ನಿಮಗೆ ₹ 3.5 ಕೋಟಿ ಸಾಲ ಕೊಡಿಸುತ್ತೇನೆ. ಈ ಚಿಕ್ಕ ಅಂಗಡಿಯನ್ನು ಷೋರೂಂ ಮಾಡಿಕೊಳ್ಳಿ’ ಎಂದಿದ್ದ. ಆ ಮಾತನ್ನು ನಂಬಿದ ನಾನು, ಆತ ಸೂಚಿಸಿದಂತೆಯೇ ನಾಲ್ಕು ಖಾಲಿ ಚೆಕ್‌ಗಳು, ಸ್ಟಾಂಪ್‌ ಪೇಪರ್ ಹಾಗೂ ಪಾನ್‌ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ಕೊಟ್ಟಿದ್ದೆ.’

‘ಆ ನಂತರ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದೆವು. ಇದೇ ಜನವರಿ ಮೊದಲ ವಾರದಲ್ಲಿ ನನ್ನ ಮನೆಗೆ ಬಂದಿದ್ದ ಆತ, ‘ಟ್ರಸ್ಟ್‌ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದೇವೆ. ನೀವು ತಲಾ 6 ಗ್ರಾಂ ತೂಕದ 187 ಚಿನ್ನದ ತಾಳಿಗಳು, 30 ಗ್ರಾಂನ 40 ಚಿನ್ನದ ಬಿಸ್ಕತ್‌ಗಳು ಹಾಗೂ 50 ಗ್ರಾಂನ 5 ಬಿಸ್ಕತ್‌ಗಳನ್ನು ಕೊಡಿಸಿದರೆ ಆದಷ್ಟು ಬೇಗನೆ ಸಾಲ ಮಂಜೂರಾಗುತ್ತದೆ’ ಎಂದು ನಂಬಿಸಿದ್ದ. ಅದರಂತೆ ನಾನು, ಜೈಪುರದ ‘ದರ್ಶನ್ ಜ್ಯುವೆಲರ್ಸ್‌ ಆ್ಯಂಡ್ ಹ್ಯಾಂಡಿಕ್ರಾಫ್ಟ್‌’ಗೆ ₹ 94 ಲಕ್ಷ ಮೌಲ್ಯದ ಚಿನ್ನಾಭರಣಗಳಿಗೆ ಆರ್ಡರ್ ಕೊಟ್ಟೆ. ಜ.13ರಂದು ಅವರು ಪಾರ್ಸಲ್ ಮೂಲಕ ಕಳುಹಿಸಿದ್ದ
ಆಭರಣಗಳನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದರು. ಸೂಕ್ತ ದಾಖಲೆಗಳನ್ನು ಸಲ್ಲಿಸಿ ಜ.22ರಂದು ಅವುಗಳನ್ನು ಬಿಡಿಸಿಕೊಂಡಿದ್ದೆ.’

‘ಮರುದಿನ ಬೆಳಿಗ್ಗೆ ಸೋಮಣ್ಣ ಹಾಗೂ ಅಂಥೋನಿ ನನ್ನ ಮನೆಗೆ ಬಂದು ಆಭರಣದ ಬ್ಯಾಗ್ ತೆಗೆದುಕೊಂಡರು. ಹಣ ಕೇಳಿದ್ದಕ್ಕೆ, ‘ಇನ್ನು ಎರಡು ತಾಸಿನಲ್ಲಿ ಆರ್‌ಟಿಜಿಎಸ್ ಮೂಲಕ ಕಳುಹಿಸುತ್ತೇವೆ’ ಎಂದು ಹೇಳಿ ಹೊರಟು ಹೋದರು. ಎರಡು ತಾಸಿನ ಬಳಿಕ ಕರೆ ಮಾಡಿದಾಗ, ಸೋಮಣ್ಣನ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು. ಆತನ ಪತ್ನಿ ಎಂದು ಪರಿಚಯಿಸಿಕೊಂಡಿದ್ದ ಗಂಗಮ್ಮನ ಮೊಬೈಲ್ ಸಹ ಸಂಪರ್ಕಕ್ಕೆ ಸಿಗಲಿಲ್ಲ. ಕೂಡಲೇ ಅಪಾರ್ಟ್‌ಮೆಂಟ್‌ಗೆ ತೆರಳಿ ವಿಚಾರಿಸಿದೆ. ಆತ ತಿಂಗಳ ಹಿಂದೆಯೇ ಫ್ಲ್ಯಾಟ್ ಖಾಲಿ ಮಾಡಿರುವುದಾಗಿ ಅಲ್ಲಿನ ನಿವಾಸಿಗಳು ಹೇಳಿದರು. ಕೂಡಲೇ ಬಸವೇಶ್ವರನಗರ ಠಾಣೆಗೆ ತೆರಳಿ
ದೂರು ಕೊಟ್ಟಿದ್ದೆ’ ಎಂದು ಮಾಹಿತಿ ನೀಡಿದರು.

ಗ್ರಾಂ ಚಿನ್ನವೂ ಜಪ್ತಿಯಾಗಿಲ್ಲ!: ‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಒಡವೆಗಳನ್ನು ಎಲ್ಲಿಟ್ಟಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆ ಬಗ್ಗೆ ಇಬ್ಬರೂ ಬಾಯ್ಬಿಡುತ್ತಿಲ್ಲ’ ಎಂದು ಅಧಿಕಾರಿಗಳು ಹೇಳಿದರು.
**
ಕುಮಾರಸ್ವಾಮಿಗೂ ದೂರು
ಸೋಮಣ್ಣ ಎಂಬಾತ ತಾನು ಮೊಳಕಾಲ್ಮೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾನೆ ಎಂದು ಕೆಲವರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ದೂರು ಸಲ್ಲಿಸಿದ್ದರು. ಆ ನಂತರ ಕುಮಾರಸ್ವಾಮಿ, ‘ಪಕ್ಷಕ್ಕೂ ಆ ಸೋಮಣ್ಣನಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೂ ಸೂಚಿಸಿದ್ದರು.
**
ವಂಚನೆಗೆ ರಾಜಕಾರಣಿಯ ಸೋಗು
‘ಎರಡು ವರ್ಷಗಳ ಹಿಂದೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಸೋಮಣ್ಣ, ಅಂದಿನಿಂದಲೂ ತಾನು ‘ಎಂಎಲ್‌ಸಿ ಸೋಮಣ್ಣ’ ಎಂದೇ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ಅಥವಾ ಮೈಸೂರಿನಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿರುವುದಾಗಿಯೂ ಹೇಳುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
**
ಸೋಮಣ್ಣನಿಂದ ಮೋಸ ಹೋದವರು ಬಸವೇಶ್ವರನಗರ ಪೊಲೀಸ್ ಠಾಣೆಗೆ (080 2294–2516) ಅಥವಾ ಇನ್‌ಸ್ಪೆಕ್ಟರ್‌ಗೆ (9480801729) ಕರೆ ಮಾಡಿ ಮಾಹಿತಿ ನೀಡಬಹುದು.
ರವಿ ಚೆನ್ನಣ್ಣನವರ್, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.