ADVERTISEMENT

ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ

ದೇಶದ ವಿವಿಧೆಡೆಯೂ ಸ್ಥಾಪನೆ: ಸಣ್ಣ ಕೈಗಾರಿಕಾ ಸಚಿವ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 20:20 IST
Last Updated 4 ಆಗಸ್ಟ್ 2013, 20:20 IST

ಬೆಂಗಳೂರು: ದೇಶದ ವಿವಿಧೆಡೆ 15 ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಇದಕ್ಕಾಗಿ ರೂ.2,240 ಕೋಟಿ ವೆಚ್ಚ ಮಾಡಲಾಗುವುದು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.   

ದೇವನಹಳ್ಳಿ ಬಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಸಂಸ್ಥೆಯ (ಎಂ.ಎಸ್.ಎಂ.ಇ.) ತಂತ್ರಜ್ಞಾನ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15 ಕೇಂದ್ರಗಳ ಪೈಕಿ ಇದು ಮೊದಲ ಕೇಂದ್ರವಾಗಿದೆ ಎಂದರು.

ಹತ್ತು ರಾಜ್ಯಗಳಲ್ಲಿ ಈಗಾಗಲೇ ಎಂ.ಎಸ್.ಎಂ.ಇ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜಾಸ್ಥಾನದಲ್ಲೂ ಇದೇ ರೀತಿಯ ಕೇಂದ್ರ ಪ್ರಾರಂಭವಾಗಲಿದೆ ಎಂದು ಹೇಳಿದರು.

ಕೈಗಾರಿಕೆಗಳಿಗಾಗಿ ಭೂಮಿ ಕಳೆದುಕೊಳ್ಳುವ ಜನರಿಗೆ ಉದ್ಯೋಗ ನೀಡುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಕೇಂದ್ರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, ತಂತ್ರಜ್ಞಾನ ಕೇಂದ್ರದ ಸ್ಥಾಪನೆಯಿಂದ ಬೆಂಗಳೂರು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗುವುದರಲ್ಲಿ ಸಂಶಯ ಇಲ್ಲ ಎಂದರು.
ಈ ಕೇಂದ್ರದಲ್ಲಿ ಪ್ರತಿ ವರ್ಷ ಹತ್ತು ಸಾವಿರ ಮಂದಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಎಚ್‌ಎಎಲ್ ಹಾಗೂ ಎನ್‌ಎಎಲ್ ನಂತಹ ಸಂಶೋಧನಾ ಕೇಂದ್ರಗಳಿಗೆ ಅನುಕೂಲವಾಗಲಿದೆ. ಜೊತೆಗೆ ಭವಿಷ್ಯದಲ್ಲಿ ಸ್ಥಳೀಯವಾಗಿ ವಿಮಾನ ತಯಾರಿಕೆಗೆ ಈ ಕೇಂದ್ರ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.  

ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಪ್ರಕಾಶ್ ಬಿ ಹುಕ್ಕೇರಿ ಮಾತನಾಡಿ, ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕ್ಲಸ್ಟರ್ ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡಬೇಕು. ಈ ಯೋಜನೆಗೆ ನೀಡಲು ಉದ್ದೇಶಿಸಿರುವ ಅನುದಾನವನ್ನು ್ಙ 15 ಕೋಟಿಯಿಂದ ರೂ.25 ಕೋಟಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ 171 ಕೈಗಾರಿಕಾ ವಸಾಹತುಗಳಿದ್ದು, ಅವುಗಳ ಅಭಿವೃದ್ಧಿಗೆ ರೂ.100 ಕೋಟಿ ಅನುದಾನ ನೀಡಬೇಕು. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು. 
ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬೆಳಗಾವಿಯಲ್ಲೂ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸುವಂತೆ ಮನವಿ ಮಾಡಿದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಮುನಿಯಪ್ಪ ಈ ಸಂಬಂಧ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, `ದೇವನಹಳ್ಳಿಯಲ್ಲಿ ನೀರಿನ ಸಮಸ್ಯೆ ಇದ್ದರೂ ರೈತರು ಕೈಗಾರಿಕಾ ಅಭಿವೃದ್ಧಿಗಾಗಿ ತಮ್ಮ ಕೃಷಿ ಭೂಮಿಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಮಿ ನೀಡಿರುವ ರೈತರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಶೇಕಡ 25ರಷ್ಟು ಮೀಸಲಾತಿ ನೀಡಬೇಕು' ಎಂದು ಒತ್ತಾಯಿಸಿದರು.

`ದೇವನಹಳ್ಳಿಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಭೂಮಿ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಈ ತಂತ್ರಜ್ಞಾನ ಕೇಂದ್ರದಲ್ಲಿ ಸ್ಥಳೀಯರಿಗೆ ತರಬೇತಿ ನೀಡಲು ಆದ್ಯತೆ ನೀಡಬೇಕು' ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಗೈರು
ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಿಯಿಂದಾಗಿ ತಂತ್ರಜ್ಞಾನ ಕೇಂದ್ರದ ಶಂಕುಸ್ಥಾಪನೆ ಕಾರ್ಯಕ್ರಮ ನಾಲ್ಕೂವರೆ ಗಂಟೆ ತಡವಾಗಿ ಪ್ರಾರಂಭವಾಯಿತು. ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಾರದ ಕಾರಣ ಕೈಗಾರಿಕೋದ್ಯಮಿಗಳು ಹಾಗೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ರಾಜಕಾರಣಿಗಳಿಗೆ ಸಮಯದ ಬಗ್ಗೆ ಕಾಳಜಿ ಇಲ್ಲ ಎಂದು ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ  ಬೆರಳೆಣಿಕೆಯಷ್ಟು ಮಂದಿ ಭಾಗವಹಿಸಿದ್ದರು.

ಸಮೀಕ್ಷೆ ಬಳಿಕ ತೀರ್ಮಾನ
ಮಂಗಳೂರು ಸಮೀಪದ ನಿಟ್ಟೋಡಿಯಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಜನರು ಹಾಗೂ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು,  ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.

ಕಾಂಗ್ರೆಸ್‌ಗೆ ಲಾಭ
ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡರೆ ಅದರಿಂದ ನಮಗೆ (ಕಾಂಗ್ರೆಸ್) ನಷ್ಟವೇನಿಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ವಿಶ್ವಾಸ ಇದೆ.
- ಎಂ. ವೀರಪ್ಪ ಮೊಯಿಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT