ಬೆಂಗಳೂರು: ಕೆನಡಾ ಮೂಲದ ಬಂಬಾರ್ಡಿಯರ್ ಏರೋಸ್ಪೇಸ್ ಕಂಪನಿಯು ನಗರದಲ್ಲಿ ತನ್ನ ಎಂಜಿನಿಯರಿಂಗ್ ಸೇವಾ ಕಚೇರಿಯನ್ನು ಪ್ರಾರಂಭಿಸಿದೆ.
ಮಂಗಳವಾರ ಉದ್ಘಾಟನೆಯಾದ ಹೊಸ ಕಚೇರಿಯು 2013ರ ಅಂತ್ಯದ ಹೊತ್ತಿಗೆ ಸುಮಾರು 50 ವೈಮಾನಿಕ ಎಂಜಿನಿಯರ್‌ಗಳನ್ನು ಹೊಂದಲಿದೆ.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಂಪನಿಯ ಉಪಾಧ್ಯಕ್ಷರಾದ ಜೀನ್ ಸೆಗ್ಯುನ್, ಕ್ಲಾಡ್ ಬ್ಯೂಡನ್, `ಸೇವಾ ಕಚೇರಿಯಲ್ಲಿನ ತಂತ್ರಜ್ಞರು ಕಂಪನಿಯ ವಿಮಾನಗಳ ತಯಾರಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ~ ಎಂದರು.
`ಸಂಕೀರ್ಣ ತಾಂತ್ರಿಕ ಸಂರಚನಾ ವಿನ್ಯಾಸ, ಸುಧಾರಿತ ಒತ್ತಡ ವಿಶ್ಲೇಷಣೆ, ಯೋಜನಾ ನಿರ್ವಹಣಾ ಸೇವೆ- ಈ ಕ್ಷೇತ್ರಗಳಲ್ಲಿ ಕಂಪನಿಯು ತರಬೇತಿ ಮತ್ತು ಮಾರ್ಗದರ್ಶನ ನೀಡಲಿದೆ~ ಎಂದು ಹೇಳಿದ ಅವರು, `ಕಂಪನಿಯು ಭಾರತದಲ್ಲಿ ಈಗಾಗಲೇ ಮಹೀಂದ್ರ- ಸತ್ಯಂ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಕ್ಯಾಪ್‌ಜೆಮಿನಿ ಸಂಸ್ಥೆಗಳೊಂದಿಗೆ ಯಶಸ್ವಿ ಸಂಬಂಧ ಹೊಂದಿದೆ~ ಎಂದು ತಿಳಿಸಿದರು.
`ಮುಂದಿನ ಇಪ್ಪತ್ತು ವರ್ಷಗಳಲ್ಲಿ ಚೀನಾ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದ ಬಾನಂಗಳದಲ್ಲಿ 20ರಿಂದ 149 ಆಸನ ಸಾಮರ್ಥ್ಯದ ಸುಮಾರು 4,000 ವಿಮಾನಗಳು ಹಾರಾಟಕ್ಕೆ ಇಳಿಯಲಿವೆ. ಭಾರತ ಒಂದರಲ್ಲೇ 1,330 ವಿಮಾನಗಳು ಹಾರಾಟಕ್ಕಿಳಿಯುವ ನಿರೀಕ್ಷೆ ಇದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.