ADVERTISEMENT

ಎಂಜಿನಿಯರ್ ಪತ್ನಿ ಸೇರಿ ಇಬ್ಬರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಬೆಂಗಳೂರು: ನಗರದ ಮಡಿವಾಳ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪತ್ನಿ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಬ್ಬಣ್ಣ ಗಾರ್ಡನ್ ಐದನೇ `ಎ~ ಅಡ್ಡರಸ್ತೆಯಲ್ಲಿ ವಾಸವಿರುವ ಸಾಫ್ಟ್‌ವೇರ್ ಎಂಜಿನಿಯರ್ ವಿಜಯ್‌ಕುಮಾರ್ ಎಂಬುವರ ಪತ್ನಿ ವಿಜಯಲಕ್ಷ್ಮಿ (23) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಗ್ರಾಮದ ವಿಜಯಲಕ್ಷ್ಮಿ, ವಿಜಯ್‌ಕುಮಾರ್ ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ವರ್ಷಿಣಿ ಎಂಬ ಎರಡು ವರ್ಷದ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮಗು ವರ್ಷಿಣಿ ಅಳುತ್ತಿದ್ದನ್ನು ಗಮನಿಸಿದ ನೆರೆಹೊರೆಯವರು ವಿಜಯ್‌ಕುಮಾರ್‌ರವರ ಮನೆಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಸಮೀಪದ ಮಂಗಮ್ಮನಪಾಳ್ಯದಲ್ಲಿ ನಡೆದಿದೆ. ಹೆಬ್ಬಗೋಡಿ ಬಳಿಯ ಶಿಕಾರಿಪಾಳ್ಯ ನಿವಾಸಿ ಮುನಿಯಪ್ಪ ಎಂಬುವರ ಪುತ್ರ ಮದನ್‌ರಾಜ್ (20) ಆತ್ಮಹತ್ಯೆ ಮಾಡಿಕೊಂಡವರು.

ಫೈನಾನ್ಸ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು ಎಂದು ಮಡಿವಾಳ ಪೊಲೀಸರು ಹೇಳಿದ್ದಾರೆ.

ಮಂಗಮ್ಮನಪಾಳ್ಯ ನಿವಾಸಿಯಾದ ನಂದೀಶ್ ಮತ್ತು ಅವರ ಪತ್ನಿ ಸುಮಾ ಎಂಬುವರು ಮದನ್‌ರಾಜ್ ಕೆಲಸ ಮಾಡುತ್ತಿದ್ದ ಫೈನಾನ್ಸ್ ಕಂಪೆನಿಗೆ ಹಣ ಕಟ್ಟುತ್ತಿದ್ದರು. ಮದನ್‌ರಾಜ್ ಹಣ ಪಡೆದುಕೊಳ್ಳಲು ಆಗಾಗ್ಗೆ ಆ ದಂಪತಿಯ ಮನೆಗೆ ಬರುತ್ತಿದ್ದರು. ಅಂತೆಯೇ ಅವರು ಬೆಳಿಗ್ಗೆ ದಂಪತಿಯ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ನಂದೀಶ್ ಕೆಲಸಕ್ಕೆ ಹೋಗಿದ್ದರು. ಅವರ ಮನೆಯಲ್ಲೇ ತಿಂಡಿ ಸೇವಿಸಿದ ಮದನ್‌ರಾಜ್ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.