ADVERTISEMENT

ಎಂಜಿನ್‌ನಲ್ಲಿ ಹೊಗೆ: ಬಸ್‌ನಿಂದ ಜಿಗಿದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 20:13 IST
Last Updated 7 ಮಾರ್ಚ್ 2014, 20:13 IST

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಎಂಜಿನ್‌ನಲ್ಲಿ ಹೊಗೆ ಕಾಣಿಸಿ­ಕೊಂಡಿದ್ದರಿಂದ ಗಾಬರಿಗೊಂಡ ಯುವಕ, ಕಿಟಕಿ ಗಾಜು ಒಡೆದು ಕೆಳಗೆ ಜಿಗಿ­ಯುವ ಯತ್ನದಲ್ಲಿ ಬಸ್‌ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕೆ.ಆರ್‌.ಪುರ ಸಮೀಪದ ಭಟ್ಟರ­ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ಬಿಹಾರ ಮೂಲದ ಸೂರಜ್ ಪಾಸ್ವಾನ್ (22) ಮೃತಪಟ್ಟವರು. ನಗರದ ಗ್ರಾನೈಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಹೊಸಕೋಟೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಬಿಎಂಟಿಸಿ ಬಸ್‌ನಲ್ಲಿ ನಗರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಹರಳೂರು– ಆರ್‌.ಮಾರುಕಟ್ಟೆ ಮಾರ್ಗದ ಬಿಎಂಟಿಸಿ ಬಸ್‌ ಭಟ್ಟರಹಳ್ಳಿ ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಎಂಜಿನ್‌­ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ಗಾಬರಿಗೊಂಡ ಚಾಲಕ ಬ್ರೇಕ್‌ ಹಾಕಿ ವಾಹನದಿಂದ ಕೆಳಗೆ ಜಿಗಿದಿದ್ದಾನೆ. ನಂತರ ನಿರ್ವಾಹಕ ಕೂಡ ಕೆಳಗೆ ಹಾರಿದ್ದಾನೆ. ಈ ಸಂದರ್ಭದಲ್ಲಿ ಬಸ್‌ ನಿಧಾನವಾಗಿ ಮುಂದೆ ಸಾಗಿದೆ. ಚಾಲಕ­ನಿಲ್ಲದೆ ಬಸ್‌ ಸಾಗುತ್ತಿರುವುದರಿಂದ ಗಾಬರಿ­ಗೊಂಡ ಪ್ರಯಾಣಿಕರು, ಬಸ್‌ನಿಂದ ಇಳಿಯಲು ಮುಂದಾಗಿದ್ದಾರೆ.

‘ಘಟನೆ ಸಂದರ್ಭದಲ್ಲಿ ಬಸ್‌ನಲ್ಲಿ 35 ಮಂದಿ ಪ್ರಯಾಣಿಕರು ಇದ್ದರು. ಕೆಲವರು ವಾಹನದ ಬಾಗಿಲಿನಿಂದ ಕೆಳಗಿ­ಳಿದರೆ, ಮತ್ತೆ ಕೆಲವರು ಕಿಟಕಿ ಗಾಜು ಒಡೆದು ಧುಮುಕಿದ್ದಾರೆ. ಆಗ ಸೂರಜ್‌ ಸಹ ಕಿಟಕಿ ಮೂಲಕ ಕೆಳಗೆ ಜಿಗಿದಿ­ದ್ದಾರೆ. ಈ ಸಂದರ್ಭದಲ್ಲಿ ಮುಂದೆ ಸಾಗುತ್ತಿದ್ದ ಬಸ್‌, ರಸ್ತೆ ಉಬ್ಬು ಸಿಕ್ಕಿದ್ದರಿಂದ ಹಿಂದಕ್ಕೆ ಬರಲಾರಂಭಿಸಿದೆ. ಆಗ ಮುಂದಿನ ಚಕ್ರ ಸೂರಜ್‌ ಮೇಲೆ ಹರಿ­ದಿದ್ದು, ಅವರು ಸ್ಥಳದಲ್ಲೇ ಸಾವನ್ನ­ಪ್ಪಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಮ್ಮುಖವಾಗಿ ಬಂದು ಸೂರಜ್‌ ಅವರ ಮೇಲೆ ಹರಿದ ಬಸ್‌, ನಂತರ ಅಶೋಕ್‌ ಎಂಬುವರ ಆಟೊಗೆ ಡಿಕ್ಕಿ ಗುದ್ದಿ ಮೋರಿಗೆ ಇಳಿದಿದೆ. ಘಟನೆ ನಂತರ ಚಾಲಕ ಮತ್ತು ನಿರ್ವಾಹಕ ಪರಾರಿ­ಯಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕೆ.ಆರ್‌.­ಪುರ ಸಂಚಾರ ಪೊಲೀಸರು ಹೇಳಿದ್ದಾರೆ.  ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.