ADVERTISEMENT

ಎಂಟು ಪಥದ ರಸ್ತೆ ನಿರ್ಮಾಣಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:40 IST
Last Updated 18 ಜನವರಿ 2011, 19:40 IST

ಬೆಂಗಳೂರು: ನಗರದ ಪಶ್ಚಿಮ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಓಕಳಿಪುರದಿಂದ ಫೌಂಟೆನ್ ವೃತ್ತದವರೆಗೆ (ದೇವರಾಜ ಅರಸು) 115.50 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಪಥದ ರಸ್ತೆ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.

ಬಸವೇಶ್ವರ ನಗರ, ರಾಜಾಜಿನಗರ, ವಿಜಯನಗರ ಬಡಾವಣೆಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕೆ ಬೇಕಾಗಿರುವ 12,818 ಚದರ ಮೀಟರ್ ಜಾಗವನ್ನು ರೈಲ್ವೆ ಇಲಾಖೆಯಿಂದ ಪಡೆದು ಅವರಿಗೆ ಬೇರೆ ಕಡೆ ಜಾಗ ನೀಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ನೈರುತ್ಯ ರೈಲ್ವೆಗೆ 28 ಕೋಟಿ ರೂಪಾಯಿ, ರಸ್ತೆ ಕಾರಿಡಾರ್‌ಗೆ 57.5 ಕೋಟಿ ರೂಪಾಯಿ, ಬೆಸ್ಕಾಂ ಮತ್ತು ಜಲಮಂಡಳಿಗೆ 20 ಕೋಟಿ ರೂಪಾಯಿ ಹಾಗೂ ಸರ್ವಿಸ್ ರಸ್ತೆಗೆ ಏಳು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದೆ ಎಂದರು.

ಕಾರಿಡಾರ್‌ಗೆ ಒಟ್ಟು 660 ಮೀಟರ್ ಜಾಗ ಬೇಕಾಗಿದೆ.  ಈ ಪೈಕಿ 251 ಚದರ ಮೀಟರ್ ಖಾಸಗಿ ಜಾಗವಾಗಿದ್ದು, ಇದರ ಸ್ವಾಧೀನಕ್ಕೂ ಅನುಮತಿ ನೀಡಲಾಗಿದೆ.ಆದಷ್ಟು ಬೇಗ ಟೆಂಡರ್ ಕರೆದು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಾಷ್ಯಂ ವೃತ್ತದಿಂದ ಕೆ.ಆರ್.ವೃತ್ತದವರೆಗೆ ಸಿಗ್ನಲ್‌ಮುಕ್ತ ಕಾರಿಡಾರ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಸಾಲಕ್ಕೆ ಖಾತರಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು 1564 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಬಿಬಿಎಂಪಿ ರೂಪಿಸಿದೆ. ಇದಕ್ಕೆ ಹಣದ ಕೊರತೆ ಇರುವುದರಿಂದ ಬಿಬಿಎಂಪಿ 200 ಕೋಟಿ ರೂಪಾಯಿ ಸಾಲ ಪಡೆಯುವುದಕ್ಕೆ ಸರ್ಕಾರ ಖಾತರಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.