ADVERTISEMENT

ಎಚ್ಐವಿ ಸೋಂಕು: ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:07 IST
Last Updated 13 ಏಪ್ರಿಲ್ 2018, 19:07 IST

ಬೆಂಗಳೂರು: ‘ಗರ್ಭಕೋಶದ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿದ ವೇಳೆ ರಕ್ತಪಡೆದಾಗ ನನಗೆ ಎಚ್‌ಐವಿ ಸೋಂಕು ತಗುಲಿದೆ’ ಎಂದು ಆಕ್ಷೇಪಿಸಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ವೈದ್ಯಕೀಯ ಮಂಡಳಿ ಹಾಗೂ ಪೊಲೀಸರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

‘ಮಹಿಳೆ ದೂರು ನೀಡಿದ್ದರೂ ಏಕೆ ತನಿಖೆ ವಿಳಂಬ ಮಾಡುತ್ತಿದ್ದೀರಿ’ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್‌, ‘ಈ ಪ್ರಕರಣದಲ್ಲಿ ಕೋರ್ಟ್‌ ಮೇಲ್ವಿಚಾರಣೆ ವಹಿಸುತ್ತದೆ. ಆದ್ದರಿಂದ ನೀವು ತನಿಖೆಯ ಪಾಕ್ಷಿಕ ವರದಿಯನ್ನು ಕೋರ್ಟ್‌ಗೆ ನೀಡಬೇಕು’ ಎಂದು ಶುಕ್ರವಾರ ನಿರ್ದೇಶಿಸಿದೆ.

‘ಈ ಕುರಿತಂತೆ ನಿಷ್ಪಕ್ಷಪಾತ, ವಸ್ತುನಿಷ್ಠ ಮತ್ತು ಸಮರ್ಥ ತನಿಖೆ ನಡೆಸಿ’ ಎಂದೂ ನಿರ್ದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದೆ.

ADVERTISEMENT

ಪ್ರಕರಣವೇನು: ನಗರದ ನಿವಾಸಿಯಾದ 45 ವರ್ಷದ ಮಹಿಳೆಯೊಬ್ಬರು ಈ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಮಹಿಳೆ, ‘ನಾನು, 2014ರ ಫೆಬ್ರುವರಿ 13ರಂದು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಮೂರು ದಿನ ಚಿಕಿತ್ಸೆ ಪಡೆದಿದ್ದೆ. ಈ ವೇಳೆ ನನಗೆ ರಕ್ತ ನೀಡಲಾಗಿತ್ತು. ರಕ್ತ ನೀಡುವ ಮುನ್ನ ಎಚ್‌ಐವಿ ಸೋಂಕು ಇರುವುದಿಲ್ಲ ಎಂದು ವೈದ್ಯಕೀಯ ವರದಿ ನೀಡಲಾಗಿತ್ತು. ಆದರೆ, ರಕ್ತ ನೀಡಿದ ಬಳಿಕ ನನಗೆ ಸೋಂಕು ತಗುಲಿರುವುದು ಕಂಡು ಬಂದಿದೆ’ ಎಂದು ಆಕ್ಷೇಪಿಸಿದ್ದಾರೆ.

‘ನಾನು ಈ ಸಂಬಂಧ ಕರ್ನಾಟಕ ವೈದ್ಯಕೀಯ ಮಂಡಳಿ, ಸ್ಥಳೀಯ ಪೊಲೀಸ್‌ ಠಾಣೆ ಹಾಗೂ ಸೈಬರ್ ಅಪರಾಧ ವಿಭಾಗಕ್ಕೂ ದೂರು ನೀಡಿದ್ದೆ. ಆದರೆ, ಪೊಲೀಸರು ತನಿಖೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐ ಅಥವಾ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.