ADVERTISEMENT

ಎಚ್‌ಎಎಲ್ ಜೊತೆ ಸ್ಪರ್ಧೆ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 20:10 IST
Last Updated 10 ಫೆಬ್ರುವರಿ 2011, 20:10 IST

ಯಲಹಂಕ ವಾಯುನೆಲೆ: ‘ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೊತೆ ಸ್ಪರ್ಧೆಗೆ ಇಳಿಯುವ ಇರಾದೆ ಇಲ್ಲ’ ಎಂದು ವೈಮಾಂತರಿಕ್ಷ ಕ್ಷೇತ್ರದಲ್ಲಿ ದಾಪುಗಾಲು ಹಾಕಲು ಹೊರಟಿರುವ ಸರ್ಕಾರಿ ಸ್ವಾಮ್ಯದ ಭಾರತ್ ಅರ್ತ್ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್) ಸ್ಪಷ್ಟಪಡಿಸಿದೆ. ಇಲ್ಲಿ ನಡೆಯುತ್ತಿರುವ ‘ಏರೊ ಇಂಡಿಯಾ’ ಪ್ರದರ್ಶನದಲ್ಲಿ ಗುರುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕಂಪೆನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಆರ್.ಎಸ್. ನಟರಾಜನ್ ಈ ವಿಷಯವನ್ನು ತಿಳಿಸಿದರು. ‘ಎಚ್‌ಎಎಲ್ ದೇಶದಲ್ಲಿ ನಂಬರ್ 1 ಕಂಪೆನಿ. ಅಷ್ಟೇ ಅಲ್ಲ, ಜಾಗತಿಕವಾಗಿಯೂ ಪ್ರಮುಖ ಕಂಪೆನಿಯಾಗಿದೆ. ಇದರೊಂದಿಗೆ ಸ್ಪರ್ಧಿಸುವ ಯಾವುದೇ ಉದ್ದೇಶ ಇಲ್ಲ’ ಎಂದರು.

‘ಗಣಿಗಾರಿಕೆ, ಭಾರಿ ಯಂತ್ರೋಪಕರಣಗಳು ಹಾಗೂ ರಕ್ಷಣಾ ಇಲಾಖೆಗೆ ಉಪಕರಣಗಳನ್ನು ತಯಾರಿಸಿಕೊಡುತ್ತಿದೆ. ಈಗ ವೈಮಾಂತರಿಕ್ಷ ಕ್ಷೇತ್ರ ತೀವ್ರವಾಗಿ ಬೆಳವಣಿಗೆ ಕಾಣುತ್ತಿರುವುದರಿಂದ ಅದರತ್ತ ಗಮನ ಹರಿಸಲಾಗುತ್ತಿದೆ’ ಎಂದು ಹೇಳಿದರು.‘ಇದೇ ಉದ್ದೇಶದಿಂದ ದೇವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ವೈಮಾಂತರಿಕ್ಷ ಪಾರ್ಕ್‌ನ ವಿಶೇಷ ಆರ್ಥಿಕ ವಲಯದಲ್ಲಿ 25 ಎಕರೆ ಭೂಮಿಯನ್ನು ಪಡೆದುಕೊಂಡಿದೆ.

ಇಲ್ಲಿ ವೈಮಾಂತರಿಕ್ಷ ಉಪಕರಣಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಸುಮಾರು ರೂ 360 ಕೋಟಿ ಹೂಡಿಕೆ ಮಾಡಲಾಗುವುದು. 2012-13ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.‘ಈಗಾಗಲೇ ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ವೈಮಾಂತರಿಕ್ಷ ತಯಾರಿಕಾ ಘಟಕವು ಎಂದಿನಂತೆ ತನ್ನ ಕಾರ್ಯನಿರ್ವಹಣೆ ಮಾಡಲಿದೆ. ಇದಕ್ಕೆ ಪೂರಕವಾಗಿ ದೇವನಹಳ್ಳಿ ಘಟಕವನ್ನು ಬಳಸಿಕೊಳ್ಳಲಾಗುವುದು’ ಎಂದು ಅವರು ನುಡಿದರು.

‘ಮೈಸೂರಿನ ಘಟಕದಲ್ಲಿ ಹೆಲಿಕಾಪ್ಟರ್‌ಗಳಿಗೆ ಗೇರ್‌ಗಳು, ವೈಮಾನಿಕ ಬಿಡಿಭಾಗಗಳು, ಸು-30 ಯುದ್ಧವಿಮಾನಗಳ ಬಿಡಿಭಾಗಗಳು, ಉಪಕರಣಗಳ ಜೋಡಣೆ ಹಾಗೂ ಅಲ್ಯುಮಿನಿಯಂ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ವಾಯುನೆಲೆಯಲ್ಲಿ ಬಳಸಲಾಗುವ ಇತರೆ ಉಪಕರಣಗಳನ್ನು ಸಹ ತಯಾರಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು. ‘ಕಂಪೆನಿಯ ವೈಮಾಂತರಿಕ್ಷ ವಹಿವಾಟು ಪ್ರತಿವರ್ಷ ರೂ 100 ಕೋಟಿಯಷ್ಟು ವೃದ್ಧಿಯಾಗಲಿದ್ದು, 2016-17ರ ವೇಳೆಗೆ ರೂ1,000 ಕೋಟಿಗೆ ತಲುಪುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.